ಬಳ್ಳಾರಿ: ಹಠಾತ್ತನೆ ಮಗುಚಿಬಿದ್ದ ಕೊಟೂರು ಗುರುಬಸವೇಶ್ವರ ರಥ, ಆರು ಭಕ್ತರಿಗೆ ಗಂಭೀರ ಗಾಯ
ಬಳ್ಳಾರಿ, ಫೆ. 21: ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇತಿಹಾಸ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ಜಾತ್ರಾ ರಥೋತ್ಸವದ ವೇಳೆ ರಥ ಏಕಾಏಕಿ ಮಗಚಿಬಿದ್ದ ಪರಿಣಾಮ ಹಲವು ಮಂದಿ ಭಕ್ತರು ರಥದ ಅಡಿಯಲ್ಲಿ ಸಿಲುಕಿದ ದುರ್ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಆರೇಳು ಜನರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ. ಗಾಯಗೊಂಡಿರುವವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.
ಪ್ರತಿ ವರ್ಷದಂತೆ ಮಂಗಳವಾರ ಸಂಜೆ 5ಗಂಟೆಯ ಸುಮಾರಿಗೆ ಕೊಟ್ಟೂರೇಶ್ವರ ರಥ ದೇವಸ್ಥಾನದಿಂದ ಪಾದಗಟ್ಟೆಯ ವರೆಗೆ ತೆರಳಿ ಅಲ್ಲಿಂದ ಹಿಂದಿರುಗುವ ವೇಳೆ ಏಕಾಏಕಿ ಒಂದು ಕಡೆ ವಾಲಿಕೊಂಡಿದೆ. ನೋಡ ನೋಡುತ್ತಿದ್ದಂತೆ ಮಗುಚಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
1.50ಲಕ್ಷಕ್ಕೂ ಅಧಿಕ ಮಂದಿ ಕೊಟ್ಟೂರೇಶ್ವರ ರಥೋತ್ಸವವನ್ನು ನೋಡಲು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಹಠಾತ್ತನೆ ರಥ ಮಗುಚಿಬಿದ್ದಿದ್ದರಿಂದ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಭಕ್ತರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಥದ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.
ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಕೊಟ್ಟೂರು ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮ್‌ಪ್ರಸಾದ್ ಮನೋಹರ್ ಖಚಿತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಶಾಸಕರಾದ ನಾಗೇಂದ್ರ, ಭೀಮಾನಾಯ್ಕಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಕೊಟ್ಟೂರೇಶ್ವರ ರಥದ ಗಾಲಿಯ ಅಚ್ಚು ಮುರಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಮ್‌ಪ್ರಸಾದ್ ಮನೋಹರ್ ಹೇಳಿದ್ದಾರೆ.