ಬೋಟ್‌ನಲ್ಲಿ ಬೆಂಕಿ ಅವಘಡ: ಲಕ್ಷಾಂತರ ರೂ. ನಷ್ಟ
Update: 2017-02-21 23:00 IST
ಹೊನ್ನಾವರ, ಫೆ.21: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ಬೆಂಕಿ ಅನಾಹುತಕ್ಕೊಳಗಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ತಾಲೂಕಿನ ಹಳದೀಪುರ ಎಂಬಲ್ಲಿ ನಡೆದಿದೆ.
ಕಾಸರಕೋಡ ಟೊಂಕದ ಖಾದರ್ ಸಾಬ್ ಅಬ್ದುಲ್ ರಝಾಕ್ ಎಂಬವರಿಗೆ ಸೇರಿದ ಬೋಟ್ ಶನಿವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿದ್ದ ಖಳಾಸಿ ಅನಂತ ಅಂಬಿಗ ಗಂಜಿ ತಯಾರಿಸಲು ಸ್ಟೌವ್ ಹೊತ್ತಿಸಿದಾಗ ಬೆಂಕಿ ಬೋಟ್‌ನ ಡಿಸೇಲ್ ಟ್ಯಾಂಕ್‌ಗೆ ಸೋಕಿದ ಪರಿಣಾಮ ಡಿಸೇಲ್ ಟ್ಯಾಂಕ್ ಸ್ಫೋಟಗೊಂಡು ಬೋಟ್ ಸುಟ್ಟು ಹಾನಿಯಾಯಿತೆನ್ನಲಾಗಿದೆ.
ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೆರಡು ಬೋಟ್‌ಗಳಲ್ಲಿದ್ದ ಮೀನುಗಾರರು ಹೊತ್ತಿ ಉರಿಯುತ್ತಿದ್ದ ಬೋಟ್‌ನಲ್ಲಿದ್ದ ಎಲ್ಲಾ ಕಾರ್ಮಿಕರನ್ನು ರಕ್ಷಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.