ಮೂಡಿಗೆರೆ: 11 ಲಕ್ಷ ರೂ. ವೌಲ್ಯದ ನಗ-ನಗದು ಕಳವು ಹಗಲಿನಲ್ಲೇ ಕೈಚಳಕ ತೋರಿದ ಕಳ್ಳರು
ಮೂಡಿಗೆರೆ, ಫೆ. 21: ಕಾಫಿ ತೋಟದ ಮಾಲಕರೊಬ್ಬರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ ಸುಮಾರು 11 ಲಕ್ಷ ರೂ. ವೌಲ್ಯದ ನಗ-ನಗದು ದೋಚಿ ಪರಾರಿಯಾಗಿರುವ ಘಟನೆ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಾರಗೋಡು ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಇಲ್ಲಿನ ಕಟ್ಟೆ ಶಿವಣ್ಣಗೌಡ ಎಂಬವರು ಸೋಮವಾರ ಬೆಳಗ್ಗೆ ತಮ್ಮ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಚಿಕ್ಕಮಗಳೂರಿಗೆ ತೆರಳಿದ್ದರು. ಈ ವೇಳೆಯನ್ನು ಬಳಸಿಕೊಂಡ ಕಳ್ಳರು ಮನೆಯ ಹಿಂಭಾಗದಲ್ಲಿ ಏಣಿಯ ಮೂಲಕ ಮಾಡಿನ ಹೆಂಚು ತೆಗೆದು ಒಳ ಪ್ರವೇಶಿಸಿದ್ದಾರೆ.
ನಂತರ ಕಬ್ಬಿಣದ ಸಲಾಕೆಯಿಂದ ಬೀರುವಿನ ಬಾಗಿಲನ್ನು ಹೊಡೆದು, ಬೀರುವಿನಲ್ಲಿದ್ದ 10 ಲಕ್ಷ ರೂ. ವೌಲ್ಯದ ಚಿನ್ನಾಭರಣ, 75 ಸಾವಿರ ರೂ. ವೌಲ್ಯದ ಬೆಳ್ಳಿಯ ವಸ್ತುಗಳ ಸಹಿತ ನಗದನ್ನು ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಸಮಯದಲ್ಲಿ ಮನೆಗೆ ವಾಪಸ್ ಆದ ದಂಪತಿಗೆ ಮನೆಯಲ್ಲಿ ಕಳವು ನಡೆದಿರುವುದು ಅರಿತು ಪೊಲಿಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಲ್ದೂರು ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರ ಸಹಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.