×
Ad

ಭ್ರಷ್ಟರು, ಕೋಮುವಾದಿಗಳು ಅಕ್ಷರಸ್ಥರೇ ಆಗಿರುವುದು ವಿಪರ್ಯಾಸ: ಸಾಹಿತಿ ಶ್ರೀಕಂಠ ಕೂಡಿಗೆ

Update: 2017-02-21 23:05 IST


ಮೂಡಿಗೆರೆ, ಫೆ.21: ಹಿಂದಿನ ಅನಕ್ಷರಸ್ಥ ಜಾತಿವಾದಿಗಳು ಇಂದು ಅಕ್ಷರಸ್ಥ ಜಾತಿವಾದಿಗಳಾಗಿದ್ದಾರೆ. ಭ್ರಷ್ಟಾಚಾರಿಗಳು ಮತ್ತು ಕೋಮುವಾದಿಗಳು ಅಕ್ಷರಸ್ಥರೇ ಆಗಿರುವುದು ನೋವಿಗೆ ಕಾರಣವಾಗಿದೆ. ನಮ್ಮ ಶಿಕ್ಷಣದ ಬಗ್ಗೆ ಮರು ವಿಮರ್ಶೆ ಮಾಡಬೇಕಾಗಿದೆ. ಆಧುನಿಕ ಯುಗದಲ್ಲಿ ಇಂಗ್ಲಿಷ್ ಪದಗಳನ್ನೇ ಬಹುತೇಕ ಬಳಸುತ್ತಿದ್ದು, ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಸಾಮಾಜಿಕ ಪರಿವರ್ತನೆಗೆ ನಮ್ಮ ಶಿಕ್ಷಣ ನಾಂದಿಯಾಗಬೇಕು ಎಂದು ಸಾಹಿತಿ ಶ್ರೀಕಂಠ ಕೂಡಿಗೆ ಕರೆ ನೀಡಿದರು.


  ಸೋಮವಾರ ಸಂಜೆ ಬಣಕಲ್ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೂಡಿಗೆರೆ ತಾಲೂಕು 6ನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
  ಸಮ್ಮೇಳನದಅಧ್ಯಕ್ಷ ಅ.ರಾ.ರಾಧಾಕೃಷ್ಣ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡಕ್ಕೆ ಗಂಡಾಂತರ ಎದುರಾಗಿದ್ದು, ಜನರಲ್ಲಿ ಕನ್ನಡ ಭಾಷಾಭಿಮಾನ ಹಾಗೂ ಬಳಕೆ ಕಡಿಮೆ ಯಾಗುತ್ತಿದೆ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿ ನಾಶಕ್ಕೆ ನಾಂದಿಯಾಗಿದೆ. ಸರಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿಯಿಂದ ಜನಸಾಮಾನ್ಯರು ಸರಕಾರದ ಜೊತೆಗೆ ಕೈಜೋಡಿಸಬೇಕಿದೆ. ರಾಜ್ಯೋತ್ಸವದಲ್ಲಿ ಆಗುವ ದುಂದು ವೆಚ್ಚವನ್ನು ನಿಲ್ಲಿಸಿ ಸರಕಾರಿ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.


  ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಉಳಿಗಮಾನ್ಯ ಪದ್ಧತಿ ಅಳಿಯಬೇಕು. ಸರ್ವರಿಗೂ ಸಮಾನ ಶಿಕ್ಷಣ ಸಿಗಬೇಕು. ಭಾಷೆಯನ್ನು ಸರಳಗೊಳಿಸಬೇಕು. ಸಾಹಿತ್ಯ ಸಮ್ಮೇಳನ ಗಳಿಂದ ಸಾರ್ವಜ ನಿಕರಲ್ಲಿ ಭಾಷಾ ಜಾಗೃತಿ ಮೂಡಿಸಲು ಸಾಧ್ಯ. ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಇಲ್ಲಿ ಉಣಬಡಿಸಬಹುದು. ಭಾಷೆ ಬಳಸುವ ಮೂಲಕ ಕನ್ನಡ ಉಳಿಸಿ ಬೆಳೆಸಬೇಕಿದೆ ಎಂದರು.

ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ತಾಪಂ ಸದಸ್ಯ ರಂಜನ್ ಅಜಿತ್ ಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಎಂಎಲ್‌ಸಿ ಡಾ. ಮೋಟಮ್ಮ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಸದಸ್ಯೆ ವೀಣಾ ಉಮೇಶ್, ಜಿಪಂ ಸದಸ್ಯ ಶಾಮಣ್ಣ, ಕೆ.ಆರ್. ಪ್ರಭಾಕರ್, ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಸಾಹಿತಿ ಹಳೇಕೋಟೆ ರಮೇಶ್, ಮುಖಂಡ ಭರತ್ ಬಾಳೂರು, ಬಿ.ಎಸ್.ವಿಕ್ರಂ, ಜೆ.ಎಸ್.ರಘು, ಅಸ್ಗರ್ ಅಹ್ಮದ್, ಎ.ಸಿ.ಅಯೂಬ್, ಎಂ.ಎಸ್. ಅಶೋಕ್, ಧರ್ಮಗುರು ಆಲ್ಬರ್ಟ್ ಡಿ.ಸಿಲ್ವಾ, ಅಬ್ದುಲ್ ರಹೀಂ ಹನೀಫಿ, ಗ್ರಾಪಂ ಅಧ್ಯಕ್ಷೆ ಸುಮತಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆ ಉಳಿಸಬೇಕಾದರೆ ಸರಕಾರಿ ಶಾಲೆಗಳ ಪಾತ್ರ ಮುಖ್ಯವಾಗಿದೆ. ನಮ್ಮ ನೆಲದಲ್ಲಿ ಖಾಸಗಿ ಶಾಲೆಗಳು ಹೆಜ್ಜೆಗೊಂದರಂತೆ ಹುಟ್ಟಿಕೊಳ್ಳುತ್ತಿವೆ. ಆದರೆ, ಕನ್ನಡ ಭಾಷೆ ಬೆಳೆಯಬೇಕಾದರೆ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯವಾಗಬೇಕಾಗಿದೆ. ಮಲೆನಾಡಿನಲ್ಲಿ ಅನೇಕ ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯ ಬೇಕು.
 ಅ.ರಾ.ರಾಧಾಕೃಷ್ಣ
ಸಮ್ಮೇಳನಾಧ್ಯಕ್ಷ

ಭರಪೂರ ಮಾರಾಟವಾದ ಪುಸ್ತಕಗಳು
ಮೂಡಿಗೆರೆ, ಫೆ. 21: ಬಣಕಲ್‌ನಲ್ಲಿ ನಡೆಯುತ್ತಿರುವ 6ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರವಂತ ಸಾಹಿತಿಗಳ ಹಾಗೂ ಉದಯೋನ್ಮುಖ ಲೇಖಕರ ಅನೇಕ ಪುಸ್ತಕಗಳು ಭರಪೂರ ಬಿಕರಿಯಾಗಿವೆ.


ಎರಡು ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಪುಸ್ತಕದ ಅಂಗಡಿ ಸಹಿತ 15 ಇತರ ಅಂಗಡಿಗಳು ಕನ್ನಡ ಭಾಷಾಭಿಮಾನಿಗಳಲ್ಲಿ ಪುಳಕವನ್ನುಂಟು ಮಾಡಿದವು. ಶಿಕ್ಷಕರು, ಶಾಲಾ ಮಕ್ಕಳು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು, ದಿನಸಿ ಅಂಗಡಿಗಳ ಮಾಲಕರ ಸಹಿತ ವಿವಿಧ ವರ್ಗದ ಜನರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡು ಬಂದರು.


ವೇದಿಕೆಯಲ್ಲಿ ವಿವಿಧ ಗಣ್ಯರು ಮಾತನಾಡುವುದನ್ನು ತದೇಕಚಿತ್ತದಿಂದ ಕೆಲಕ್ಷಣ ಗಂಭೀರವಾಗಿ ಗಮನಿಸುತ್ತಿದ್ದ ಸಭಿಕರು ನಂತರ ಪುಸ್ತಕಗಳ ಅಂಗಡಿ ಸಹಿತ ಇತರ ಅಂಗಡಿಗಳತ್ತ ಮುಖ ಮಾಡುತ್ತಿದ್ದರು.
ಮಂಗಳೂರಿನ ಫಿಲಿಕ್ಸ್ ಎಂಬವರ ಆಯುರ್ವೇದಿಕ್ ಔಷಧ ಅಂಗಡಿಯು ಎಲ್ಲರ ಗಮನ ಸೆಳೆಯಿತು. ವಿವಿಧ ಗಿಡಮೂಲಿಕೆಗಳಿಂದ ತಯಾರಾಗಿದ್ದ ಟೂತ್‌ಪೇಸ್ಟ್, ಸಾಬೂನು, ಕೊಬ್ಬು ಕರಗಿಸುವ ಔಷಧಿ, ಆಶ್ಯೂರ್, ಮಧುಮೇಹ ಶಮನದ ಔಷಧಿಗಳು ಹೆಚ್ಚು ಬಿಕರಿಯಾದವು.

ಪುಸ್ತಕದ ಅಂಗಡಿಗಳಲ್ಲಿ ಬಾನು ಮುಸ್ತಾಕ್‌ಅವರ ‘ಹಸೀನಾ ಮತ್ತು ಇತರ ಕಥೆಗಳು’, ಕುಂ. ವೀರಭದ್ರಪ್ಪಅವರ ‘ನಿಜಲಿಂಗ’, ಬಿ.ಎಲ್. ವೇಣು ಅವರ ‘ಗಂಡುಗಲಿ ಮದಕರಿನಾಯಕ’, ಫ್ರೊ. ಐ.ವಿ. ನಂಜರಾಜ್ ಅರಸು ಅವರ ‘ಆಲವೇಲಮ್ಮನ ಶಾಪ’, ‘ಒಂದು ಶವದ ಪರೀಕ್ಷೆ’, ರವಿ ಬೆಳೆಗೆರೆಯವರ ‘ಮಾಟಗಾತಿ’, ‘ಮುಸ್ಲಿಂ’, ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿಕ್ರಾಸ್’, ನಂದೀಶ್ ಬಂಕೇನಹಳ್ಳಿಯವರ ‘ಮುಖವಾಡ’, ಕಲ್ಕುಳಿ ವಿಠಲ ಹೆಗ್ಡೆಯವರ ‘ಮಂಗನ ಬ್ಯಾಟೆ’ ಸಹಿತ ‘ಚಂದ್ರಶೇಖರ್ ಆಝಾದ್’, ‘ಭಗತ್ ಸಿಂಗ್’ ಪುಸ್ತಕಗಳು ಪ್ರಬಂಧ, ರಸಪ್ರಶ್ನೆಗಳ ಪುಸ್ತಕಗಳು ಹೆಚ್ಚು ಮಾರಾಟವಾದವು.

ಆಂಗ್ಲ ಅಕ್ಷರಗಳ ಕೈಚೀಲ: ಸಾಹಿತ್ಯಾಸಕ್ತರ ಅಸಮಾಧಾನ
ಮೂಡಿಗೆರೆ, ಫೆ.21: ಬಣಕಲ್‌ನಲ್ಲಿ ಎರಡು ದಿನ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ಪುಕ್ಕಟೆ ವಿತರಣೆಗೆ ತಂದಿದ್ದ ಕೈಚೀಲದ ತುಂಬಾ ಆಂಗ್ಲ ಅಕ್ಷರಗಳು ತುಂಬಿದ್ದು, ಸಾಹಿತ್ಯಾಸಕ್ತರ ಅಸಮಾಧಾನಕ್ಕೆ ಕಾರಣವಾಯಿತು.

ಕೈ ಚೀಲ ವಿತರಣೆ ವೇಳೆ ಕೈಚೀಲ ತಮಗೆ ಬೇಡ. ಆಂಗ್ಲ ಲಿಪಿಯ ಅಕ್ಷರವುಳ್ಳ ಚೀಲವನ್ನು ಸಾಹಿತ್ಯ ಸಮ್ಮೇಳನಕ್ಕೆ ತಂದಿರುವ ಸಂಘಟಕರು ಕನ್ನಡ ಭಾಷೆಗೆ ಅಪಮಾನ ಎಸಗುತ್ತಿದ್ದಾರೆ ಎಂದು ಕೈ ಚೀಲಗಳನ್ನು ಪಡೆಯದೆ ಸಾಹಿತ್ಯ ಪ್ರೇಮಿಗಳು ಹಿಂದಿರುಗಿಸುತ್ತಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿದ್ದ ಶಿಕ್ಷಕರು ಮತ್ತು ನೌಕರರು ಆಂಗ್ಲ ಅಕ್ಷರ ಹೊಂದಿದ್ದ ಕೈಚೀಲವನ್ನು ಪಡೆದು, ಕನ್ನಡ ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೊಂಡೊಯ್ದಿಗ ಕೈಚೀಲದ ಮೂಲಕ ಇಂಗ್ಲಿಷ್ ಪ್ರಚಾರಕ್ಕೆ ಹೊರಟ್ಟಿದ್ದೀರ ಎಂದು ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಪ್ರಶ್ನಿಸಿದರೆ ನಮ್ಮ ಮಾನ ಉಳಿಯದು ಎಂದು ಶಿಕ್ಷಕರು ಮತ್ತು ನೌಕರರು ಅಳಲು ತೋಡಿಕೊಳ್ಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News