ಇರಾನಿ ಗ್ಯಾಂಗ್‌ಗೆ ಸೇರಿದ ಇಬ್ಬರ ಸೆರೆ: ಪೊಲೀಸರ ಸೋಗಿನಲ್ಲಿ ಮಹಿಳೆಯರ ಚಿನ್ನಾಭರಣ ಅಪಹರಿಸುತ್ತಿದ್ದ ವಂಚಕರು!

Update: 2017-02-22 11:27 GMT

ಶಿವಮೊಗ್ಗ, ಫೆ. 22: ಇತ್ತೀಚೆಗೆ ನಗರದಲ್ಲಿ ಪೊಲೀಸರೆಂದು ಹೇಳಿಕೊಂಡು ಹಾಡಹಗಲೇ ಮಹಿಳೆಯರಿಂದ ಚಿನ್ನಾಭರಣ ಅಪಹರಿಸಿ ನಾಗರಿಕರ ನಿದ್ದೆಗೆಡುವಂತೆ ಮಾಡಿದ್ದ ಈರ್ವರು ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದು, ಇವರಿಬ್ಬರು ಕುಖ್ಯಾತ ’ಇರಾನಿ ಗ್ಯಾಂಗ್’ಗೆ ಸೇರಿದವರೆಂಬುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಮೂಲತಃ ಬೆಂಗಳೂರಿನವನಾರ ಪ್ರಸ್ತುತ ಗುಲ್ಬರ್ಗಾದ ಗೌಸ್ ನಗರದ ನಿವಾಸಿ ಮುಹಮ್ಮದ್ ಕಂಬಾರ್ ಯಾನೆ ಅಲಿ ಸೈಯದ್ (30) ಹಾಗೂ ಮೂಲತಃ ಮುಂಬೈನ ಪ್ರಸ್ತುತ ಗುಲ್ಬರ್ಗಾದಲ್ಲಿ ವಾಸಿಸುತ್ತಿರುವ ಹಸನ್ ಅಜಂ ಯಾನೆ ಅಜಂ (27) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಇವರಿಂದ 225 ಗ್ರಾಂ ತೂಕದ ಚಿನ್ನಾಭರಣ, ಒಂದು ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಮೌಲ್ಯ 6.5 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಶಿವಮೊಗ್ಗ ನಗರದ ಚೌಡೇಶ್ವರಿ ಚೆಕ್ ಪೋಸ್ಟ್ ಹತ್ತಿರ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಆಗಮಿಸಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಕೋಟೆ ಹಾಗೂ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ 4 ಸರಗಳ್ಳತನ, ಎರಡು ವಂಚನೆ ಹಾಗೂ ಒಂದು ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು.ಇವರಿಬ್ಬರು ಇರಾನಿ ಗ್ಯಾಂಗ್‌ಗೆ ಸೇರಿದವರಾಗಿದ್ದಾರೆ. ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಂದ್ರಪ್ಪ, ಸಬ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಂಚನೆಯ ಪರಿ:

ಇತ್ತೀಚೆಗೆ ಆರೋಪಿಗಳು ಪೊಲೀಸರೆಂದು ಹೇಳಿಕೊಂಡು ನಗರದ ಎರಡು ಕಡೆ ಮಹಿಳೆಯರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದರು.

ಜನನಿಬಿಡ ಪ್ರದೇಶಗಳಲ್ಲಿಯೇ ಬೀಡುಬಿಡುತ್ತಿದ್ದ ಆರೋಪಿಗಳು, ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಿಮ್ಮ ಮೈಮೇಲಿರುವ ಚಿನ್ನಾಭರಣ ಬಿಚ್ಚಿ ಬ್ಯಾಗ್‌ನಲ್ಲಿಟ್ಟುಕೊಳ್ಳಿ ಎಂದು ಮಹಿಳೆಯರಲ್ಲಿ ಭಯ ಹುಟ್ಟಿಸುತ್ತಿದ್ದರು. ಅವರ ಬಳಿಯಿರುವ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಬ್ಯಾಗ್‌ನಲ್ಲಿಟ್ಟುಕೊಡುವ ನಾಟಕ ಮಾಡಿ ಅವರಿಗೆ ಗೊತ್ತಿಲ್ಲದಂತೆ ಚಿನ್ನಾಭರಣ ಎಗರಿಸುತ್ತಿದ್ದರು. ಕಲ್ಲು, ಮಣ್ಣು ತುಂಬಿದ ಪೊಟ್ಟಣ ಕೊಟ್ಟು ಕಳುಹಿಸುತ್ತಿದ್ದರು. ಮಹಿಳೆಯರು ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದ ವಿವರ ಗೊತ್ತಾಗುತ್ತಿತ್ತು. ಇದರ ಜೊತೆಗೆ ಸರ ಅಪಹರಣ, ಬೈಕ್ ಕಳವು ಕೃತ್ಯಗಳಲ್ಲಿಯೂ ಇವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News