ಶಿವಮೊಗ್ಗ: ಏಳು ತಿಂಗಳ ಹಿಂದೆ ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ

Update: 2017-02-22 11:50 GMT

ಶಿವಮೊಗ್ಗ, ಫೆ. 22: ಕಳೆದ ಏಳು ತಿಂಗಳ ಹಿಂದೆ ನಗರದ ಹೊರವಲಯ ಅಬ್ಬಲಗೆರೆ ಬಳಿ ಬೈಕ್ ಸವಾರರೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿ ನಗನಾಣ್ಯ ದೋಚಿದ್ದ ನಾಲ್ವರು ಆಪಾದಿತರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ರಸ್ತೆಯ ಮಾಚೇನಹಳ್ಳಿ ಹಾಲಿನ ಡೈರಿ ಬಳಿಯ ನಿವಾಸಿ ಬಿ. ಮಂಜು (29), ಗಾಂಧಿಬಜಾರ್ ಧರ್ಮರಾಯನ ಕೇರಿ ವಾಸಿ ಭರತ್ (19), ವಿನೋಬನಗರ 60 ಅಡಿ ರಸ್ತೆಯ ತರ್ಕಾರಿ ಮಾರ್ಕೆಟ್ ಬಳಿಯ ವಾಸಿ ಸುಮಂತ್ (19) ಮತ್ತು ಅಶೋಕನಗರ ಚಾನಲ್ ಏರಿಯಾ ವಾಸಿ ಭಾಗ್ಯ ರಾಜು (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳನ್ನು ಮಾಚೇನಹಳ್ಳಿ ಡೈರಿ ಸಮೀಪ ಪೊಲೀಸರು ಬಂಧಿಸಿದ್ದಾರೆ. ಆಪಾದಿತರು ದರೋಡೆ ಮಾಡಿದ್ದ 16 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ಸ್‌ಪೆಕ್ಟರ್ ಗಂಗಾಧರಪ್ಪ, ಸಬ್ ಇನ್ಸ್‌ಪೆಕ್ಟರ್ ಉಮೇಶ್‌ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ:

6-7-2016 ರಂದು ಸೊರಬ ತಾಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸಿ ರಾಘವೇಂದ್ರ ಎಂಬುವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಸೊರಬದಿಂದ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದ ವೇಳೆ, ಅಬ್ಬಲಗೆರೆಯ ಬಳಿ ಎರಡು ಬೈಕ್‌ಗಳಲ್ಲಿ ಆಗಮಿಸಿದ ಐವರು ಯುವಕರ ತಂಡ ಇವರನ್ನು ಅಡ್ಡಗಟ್ಟಿ ನಿಲ್ಲಿಸಿತ್ತು.

ನಂತರ ಮಾರಕಾಸ್ತ್ರದಿಂದ ಇವರಿಗೆ ಜೀವ ಬೆದರಿಕೆ ಹಾಕಿ ಅವರ ಬಳಿಯಿದ್ದ 3400 ರೂ. ನಗದು ಹಾಗೂ 16 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಕಿತ್ತುಕೊಂಡು ಪರಾರಿಯಾಗಿತ್ತು. ಈ ಸಂಬಂಧ ರಾಘವೇಂದ್ರರವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಏಳು ತಿಂಗಳ ನಂತರ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News