ಬಿಜೆಪಿ ಹೈಕಮಾಂಡ್‌ಗೆ ಚೆಕ್ ಮೂಲಕ ಹಣ : ‘ನರೇಂದ್ರಮೋದಿ ಕ್ರಮ ಕೈಗೊಳ್ಳುತ್ತಾರಾ’ ಎಚ್‌ಡಿಕೆ ಸವಾಲು

Update: 2017-02-22 16:29 GMT

ಬೆಂಗಳೂರು, ಫೆ.22: ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಬಿಜೆಪಿ ಹೈಕಮಾಂಡ್‌ಗೆ ಚೆಕ್ ಮೂಲಕ ಹಣ ನೀಡಿರುವ ದಾಖಲೆಗಳಿವೆ. ಅದನ್ನು ಬಿಡುಗಡೆ ಮಾಡಿದರೆ ಪ್ರಧಾನಿ ನರೇಂದ್ರಮೋದಿ ಕ್ರಮ ಕೈಗೊಳ್ಳುತ್ತಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಬುಧವಾರ ನಗರದ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ಗೆ ಚೆಕ್ ಮೂಲಕ ಹಣ ಪಾವತಿ ಮಾಡಿರುವ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡುವಂತೆ ಯಡಿಯೂರಪ್ಪ ಹೇಳಿದ್ದಾರೆ. ನಾನು ದಾಖಲೆಗಳನ್ನು ಬಿಡುಗಡೆ ಮಾಡಲು ಸಿದ್ಧ. ಆದರೆ, ಕ್ರಮ ಕೈಗೊಳ್ಳುವವರು ಯಾರೂ ಎಂದು ಪ್ರಶ್ನಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಸಾರ್ವಜನಿಕವಾಗಿ ಹೇಳಿಕೆ ನೀಡಲಿ, ನಾನು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರಮೋದಿಗೆ ಹೇಳುವ ತಾಕತ್ತು ಇದೆಯೆ ಅವರಿಗೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ನಾನು ಯಡಿಯೂರಪ್ಪ ಅವರಂತೆ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಒಂದು ಡೈರಿಯ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡುವುದಿಲ್ಲ. ಚೆಕ್‌ಮೂಲಕ ಹಣ ಪಡೆದಿರುವ ಪ್ರಕರಣಗಳೆ ನ್ಯಾಯಾಲಯದಲ್ಲಿ ನಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‌ಕುಮಾರ್ ನಡುವೆ ನಡೆದಿರುವ ಹಣ ಪಾವತಿ ಕುರಿತ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್‌ನವರೆ ಬಿಡುಗಡೆ ಮಾಡಿದ್ದು, ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದು ಅವರು ಹೇಳಿದರು.

ಆದಾಯ ತೆರಿಗೆ ದಾಳಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಯಾರ ಮೇಲಾದರೂ ಆದಾಯ ತೆರಿಗೆ ದಾಳಿ ನಡೆದಿದೆ ಎಂದರೆ, ಅದು ಮಹಾ ಅಪರಾಧವೇನಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಅಕ್ರಮ ಆಸ್ತಿ, ಆದಾಯಕ್ಕಿಂತ ಮೀರಿದ ಸಂಪತ್ತು ಕ್ರೋಢಿಕರಣ ಆಗಿರುವ ಕುರಿತು ಮಾಹಿತಿ, ಅನುಮಾನ ಲಭ್ಯವಾದರೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸು ತ್ತಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿಪಾಸ್ತಿಯಿದ್ದರೆ ನೋಟಿಸ್ ನೀಡಿ ವಿವರಣೆ ಯನ್ನು ಕೇಳುತ್ತಾರೆ. ಆದುದರಿಂದಲೆ, ನಾನು ಸಚಿವ ರಮೇಶ್‌ಜಾರಕಿಹೊಳಿ, ಶಾಸಕ ಎಂಟಿಬಿ ನಾಗರಾಜ್ ಮೇಲೆ ನಡೆದ ದಾಳಿಯ ಕುರಿತು ಯಾವುದೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಪಕ್ಷದಿಂದ ಮೂರು ಅಲ್ಲ, ನೂರು ಜನ ಮುಖಂಡರನ್ನು ಸೇರಿಸಿಕೊಳ್ಳಲ್ಲಿ. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಆಗಿದೆ ಎಂಬ ರೀತಿಯಲ್ಲಿ ವರ್ತಿಸುತ್ತಿರುವ ಬಿಜೆಪಿ ನಾಯಕರು, ಇನ್ನೇಕೆ ಅನ್ಯ ಪಕ್ಷಗಳ ಮುಖಂಡರ ನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಅವರ ಮನೆಬಾಗಿಲಿಗೆ ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಾಂಡವರಿಗೆ ಅಭಿನಂದನೆ  : ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಪಂಚ ಪಾಂಡವರಾದ ನಾವೇ ಎಂಬ ಜೆಡಿಎಸ್‌ನಿಂದ ಉಚ್ಛಾಟನೆಯಾಗಿರುವ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮುಖ್ಯಮಂತ್ರಿ ಮಾಡಿದ್ದು ಅವರೆ, ಆದುದರಿಂದಲೆ, ಜನರಿಗೆ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಒಕ್ಕಲಿಗರ ಸಂಘದಲ್ಲಿ ಉಲ್ಬಣಗೊಂಡಿರುವ ಸಮಸ್ಯೆಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಾಯಕತ್ವ ಹಾಗೂ ಆದಿಚುಂಚನಗಿರಿ ಶ್ರೀಗಳ ಮಾರ್ಗ ದರ್ಶನದಲ್ಲಿ ಬಗೆಹರಿಸಲಾಗುವುದು. ಇನ್ನೊಂದು ವಾರದಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದು, ಸಂಘವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದೆ. ಸಂಘದ 35 ನಿರ್ದೇಶಕರು ಸ್ವಪ್ರತಿಷ್ಠೆ ಬಿಟ್ಟು, ಮುಂದುವರೆಯಬೇಕು.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News