​ಇಬ್ಬರು ಬೈಕ್ ಚೋರ ಬಾಲಕರ ಬಂಧನ

Update: 2017-02-22 17:31 GMT

ಶಿವಮೊಗ್ಗ, ಫೆ. 22: ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 10 ಬೈಕ್‌ಗಳನ್ನು ಕಳವು ಮಾಡಿ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಇಬ್ಬರು ಆಪಾದಿತ ಬಾಲಕರು ಬೈಕ್‌ವೊಂದರ ಕಳವಿಗೆ ಹೊಂಚು ಹಾಕುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಇವರನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದ ಬಂದಿದೆ.


ಬಳಿಕ ವಿಚಾರಣೆಗೆ ಒಳಪಡಿಸಿದಾಗ ನಗರದ ಜಯನಗರ, ತುಂಗಾನಗರ, ವಿನೋಬನಗರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಸುಮಾರು 10 ಬೈಕ್‌ಗಳನ್ನು ಕದ್ದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.


ಆರೋಪಿಗಳಿಂದ ವಶಕ್ಕೆ ಪಡೆದಿರುವ ಬೈಕ್‌ಗಳ ವೌಲ್ಯ ಸುಮಾರು 2.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಬಂಧಿತ ಬಾಲಕರು ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News