​ನೂರಾರು ಕೋಟಿ ರೂ. ಯೋಜನೆಯಲ್ಲಿ ಅಕ್ರಮ

Update: 2017-02-23 17:28 GMT

ಶಿವಮೊಗ್ಗ, ಫೆ. 23: ನೂರಾರು ಕೋಟಿ ರೂ. ವೆಚ್ಚದ ಮೂರು ಪ್ರಮುಖ ಕಾಮಗಾರಿಗಳು ಕಳಪೆ ಯಾಗಿವೆ ಎಂಬ ಆರೋಪದ ಪರಿಶೀಲ ನೆಗೆ ನಿಯೋಜನೆಯಾಗಿರುವ ಜಿಲ್ಲಾ ಪಂಚಾ ಯತ್ ಸದನ ಸಮಿತಿಯಲ್ಲಿಯೇ ಭಿನ್ನ ರಾಗ ಕೇಳಿಬರ ಲಾರಂಭಿಸಿದ್ದು, ಇದು ಜಿ.ಪಂ. ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಶಿಫಾರಸಿಗೆ ಬೆಲೆಯಿಲ್ಲ!: ತುಂಗಾ ನಾಲೆಗಳ ಆಧುನೀಕರಣ, ಭದ್ರಾ ಅಣೆಕಟ್ಟು ಡ್ರಿಪ್ ಯೋಜನೆ ಹಾಗೂ ಭದ್ರಾ-ಗೋಂಧಿ ನಾಲೆ ಕಾಮಗಾರಿಗಳ ಪರಿಶೀಲನೆಯನ್ನು ಜಿ.ಪಂ. ಸದನ ಸಮಿತಿ ನಡೆಸುತ್ತಿದೆ.

ಈಗಾಗಲೇ ಸಮಿತಿಯು ಎರಡು ಕಾಮಗಾರಿಗಳ ಪರಿಶೀಲನೆ ನಡೆಸಿ ಜಿ.ಪಂ. ಅಧ್ಯಕ್ಷರಿಗೆ ಮಧ್ಯಾಂತರ ವರದಿ ಸಲ್ಲಿಸಿದೆ. ಸಂಪೂರ್ಣ ಕಳಪೆಯಾಗಿ ನಡೆಯುತ್ತಿರುವ ತುಂಗಾ ನಾಲೆಯ ಕಾಂಕ್ರಿಟೀಕರಣ ಕಾಮಗಾರಿ ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಗುತ್ತಿಗೆದಾರ ಹಾಗೂ ಕಾಮಗಾರಿ ಉಸ್ತುವಾರಿ ವಹಿಸಿದ್ದ ಸಂಬಂಧಿಸಿದ ಇಲಾಖೆ ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವುದು ಸೇರಿದಂತೆ ಮಧ್ಯಾಂತರ ವರದಿಯಲ್ಲಿ ಹಲವು ಶಿಫಾರಸುಗಳನ್ನು ಸಮಿತಿ ಮಾಡಿತ್ತು.

ಇತ್ತೀಚೆಗೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸಮಿತಿಯ ಮಧ್ಯಾಂತರ ವರದಿಮಂಡನೆಯಾಗಿ ಚರ್ಚೆಯೂ ನಡೆದಿದೆ. ಆದರೆ, ಇಲ್ಲಿಯವರೆಗೂ ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿ ಸ್ಥಗಿತಗೊಂಡಿಲ್ಲ. ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮವಾಗಿಲ್ಲ. ಇದು ಸಮಿತಿಯಲ್ಲಿರುವ ಕೆಲ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.


ತುಂಗಾ ನಾಲೆಯ ಕಾಂಕ್ರಿಟೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿ ನಡೆಯುತ್ತಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಉಳಿದಂತೆ ಭದ್ರಾ ಅಣೆಕಟ್ಟು ಡ್ರಿಪ್ ಯೋಜನೆ ಕಾಮಗಾರಿಯಲ್ಲಿ ಸ್ವಲ್ಪಪ್ರಮಾಣದಲ್ಲಿ ನಿಯಮ ಉಲ್ಲಂಘನೆಯಾಗಿತ್ತು. ಈ ಎರಡೂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯು ಮಧ್ಯಾಂತರ ವರದಿಯನ್ನು ಜಿಪಂ ಅಧ್ಯಕ್ಷರಿಗೆ ಸಲ್ಲಿಸಿದೆ. ಮುಂದಿನ ವಾರ ಭದ್ರಾ-ಗೋಂಧಿ ನಾಲೆಗಳ ಆಧುನೀಕರಣ ಕಾಮ ಗಾರಿ ಪರಿಶೀಲನೆ ನಡೆಸಲಾಗುವುದು. ಸಮಿತಿಯ ಮಧ್ಯಾಂತರ ವರದಿಯ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸದನ ಸಮಿ ತಿಯ ಅಧ್ಯಕ್ಷ ಜೆ.ಪಿ.ಯೋಗೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.


ಮಧ್ಯಾಂತರ ವರದಿಯ ಶಿಫಾರಸು ಅನುಷ್ಠಾನ ಗೊಳಿಸದ ಸದನ ಸಮಿತಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.
ತುಂಗಾ ನಾಲೆಗಳ ಆಧುನೀಕರಣ, ಭದ್ರಾ ಅಣೆಕಟ್ಟು ಡ್ರಿಪ್ ಯೋಜನೆ ಹಾಗೂ ಭದ್ರಾ-ಗೋಂಧಿ ನಾಲೆ ಕಾಮಗಾರಿಗಳು ನಿಗದಿತ ಗುಣಮಟ್ಟದಲ್ಲಿ ನಡೆಯುತ್ತಿಲ್ಲ. ಕಳಪೆಯಾಗಿ ನಡೆಯುತ್ತಿದೆ ಎಂಬ ಆರೋಪವನ್ನು ಕೆಲ ಜಿ.ಪಂ. ಸದಸ್ಯರು ಈ ಹಿಂದಿನ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಮಾಡಿದ್ದರು. ಸಭೆಗಳಲ್ಲಿ ಸುದೀರ್ಘ ಚರ್ಚೆಯೂ ನಡೆದಿತ್ತು.

ಈ ಮೂರು ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಸರ್ವ ಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯ ಜೆ.ಪಿ.ಯೋಗೇಶ್‌ಅವರನ್ನು ನೇಮಕ ಮಾಡಲಾಗಿತ್ತು. ಬಿಜೆಪಿ ಸದಸ್ಯರಾದ ಕೆ.ಇ. ಕಾಂತೇಶ್, ವೀರಭದ್ರಪ್ಪ ಪೂಜಾರ್, ಕಾಂಗ್ರೆಸ್‌ನ ಕಲಗೋಡು ರತ್ನಾಕರ್ ಅವರನ್ನು ನೇಮಕ ಮಾಡಲಾಗಿತ್ತು. ಅಧಿಕಾರಿ ವರ್ಗದಿಂದ ಜಿ.ಪಂ. ಉಪ ಕಾರ್ಯದರ್ಶಿ ಕೆ.ಎಸ್. ಮಣಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಅವರನ್ನು ನಿಯೋಜಿಸಲಾಗಿತ್ತು. ಈಗಾಗಲೇ ಈ ಸಮಿತಿ ತುಂಗಾ ನಾಲೆಗಳ ಆಧುನೀಕರಣ ಹಾಗೂ ಭದ್ರಾ ಅಣೆಕಟ್ಟು ಡ್ರಿಪ್ ಯೋಜನೆ ಕಾಮಗಾರಿಯ ಖುದ್ದು ಪರಿಶೀಲನೆ ನಡೆಸಿದೆ. ಉಳಿದಂತೆ ಭದ್ರಾ -ಗೋಂಧಿ ನಾಲೆ ಕಾಮಗಾರಿಯನ್ನು ಇನ್ನಷ್ಟೇ ಪರಿಶೀಲನೆ ಮಾಡಬೇಕಾಗಿದೆ.

ಸಮಿತಿಯು ಮಧ್ಯಾಂತರ ವರದಿ ಸಲ್ಲಿಸಿದ್ದು, ಅದರಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಇದು ಅನುಷ್ಠಾನಕ್ಕೆ ಬಂದಿಲ್ಲ. ಸಮಿತಿಯ ವರದಿಗೆ ಬೆಲೆಯಿಲ್ಲದಂತಾಗಿದೆ. ಸಮಿತಿಯಲ್ಲಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಬೇಕು. ಇಲ್ಲದಿದ್ದ ಪಕ್ಷದಲ್ಲಿ ನಾನು ಸಮಿತಿಯಿಂದ ಹೊರ ಬರುವುದು ಅನಿವಾರ್ಯವಾಗಿದೆ ಎಂದು ಸದನ ಸಮಿತಿ ಸದಸ್ಯ ಕೆ.ಇ.ಕಾಂತೇಶ್ ಸಮಿತಿ ಯನ್ನು ಎಚ್ಚರಿಸಿದ್ದಾರೆ.


ಸದನ ಸಮಿತಿ ನೀಡಿರುವ ಮಧ್ಯಾಂತರ ವರದಿಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗಿದೆ. ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕಾಗಿದೆ. ಸಮಿತಿಯು ಪರಿಶೀಲನೆ ಪೂರ್ಣಗೊಳಿಸಿ ನೀಡುವ ಅಂತಿಮ ವರದಿಯನ್ನೂ ಸಭೆಯಲ್ಲಿ ಮಂಡಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News