ಮುಸ್ಲಿಮ್ ಉಪನ್ಯಾಸಕಿಯರ ಮೇಲೆ ಹೆಚ್ಚಿದ ಒತ್ತಡ

Update: 2017-02-23 17:35 GMT

ಭಟ್ಕಳ, ಫೆ.23: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉದ್ಭವಗೊಂಡಿರುವ ಕೇಸರಿ ಶಾಲು- ಬುರ್ಖಾ ವಿವಾದ ಇಂದಿಗೂ ಮುಂದುವರಿದಿದೆ. ಈ ಸಂಬಂಧ ಇಂದು ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ್‌ರ ನೇತೃತ್ವದಲ್ಲಿ ಭಟ್ಕಳ ಡಿವೈಎಸ್ಪಿ ಶಿವಕುಮಾರ್ ಹಾಗೂ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ನಾಯ್ಕ, ಬಿ.ಬಿ.ನಾಯ್ಕ, ಪ್ರಾಂಶುಪಾಲೆ ಮಂಜುಳಾ ಅವರೊಂದಿಗೆ ವಿದ್ಯಾರ್ಥಿ, ಉಪನ್ಯಾಸಕರ ಸಭೆ ನಡೆಯಿತು.

ಆದರೆ ಯಾವುದೇ ನಿರ್ಣಯ ಸಭೆಯಲ್ಲಿ ವ್ಯಕ್ತವಾಗದ ಕಾರಣ ಸಭೆ ಮುಕ್ತಾಯಗೊಂಡಿತು ಎಂದು ತಿಳಿದುಬಂದಿದೆ. ಸಭೆಯಲ್ಲಿ ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಪಟ್ಟ ಸಹಾಯಕ ಆಯುಕ್ತ ಮಂಜುನಾಥ್, ಕಾಲೇಜು ಮಟ್ಟದಲ್ಲಿ ಸರಕಾರ ಉಪನ್ಯಾಸಕರಿಗೆ ಯಾವುದೇ ವಸ್ತ್ರ ಸಂಹಿತೆ ಅಳವಡಿಸದ ಕಾರಣ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸಭ್ಯವಸ್ತ್ರಗಳನ್ನು ಧರಿಸಿ ಬರಬಹುದಾಗಿದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದಾಗ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಸೋಮವಾರದವರೆಗೆ ಕಾಯ್ದು ನೋಡುತ್ತೇವೆ. ಬುರ್ಖಾ ಧರಿಸಿ ಕಾಲೇಜಿಗೆ ಬಂದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಬೆದರಿಕೆಯನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.


 ಈ ನಡುವೆ ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿ ಹಾಗೂ ಕೆಲ ಉಪನ್ಯಾಸಕರಿಂದ ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿರುವ ಉಪನ್ಯಾಸಕಿಯರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಅವರು ಬುರ್ಖಾ ಹಾಕುವುದನ್ನು ನಿಲ್ಲಿಸಬೇಕು ಇಲ್ಲವೇ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಒತ್ತಡಗಳು ಬಾಹ್ಯವಾಗಿ ಬರುತ್ತಿದ್ದು, ಇದಕ್ಕೆ ಉಪನ್ಯಾಸಕಿಯರು ಮಾನಸಿಕವಾಗಿ ತುಂಬ ನೊಂದುಕೊಂಡಿರುವುದಾಗಿ ತಿಳಿದುಬಂದಿದೆ.

ಒಂದು ವೇಳೆ ಕಾಲೇಜು ಹಾಗೂ ವಿದ್ಯಾರ್ಥಿಗಳ ಒತ್ತಡದಿಂದ ಉಪನ್ಯಾಸಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಯಾರು ಹೊಣೆ ಎಂಬ ಮಾತುಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ.

ನಮ್ಮ ಇಷ್ಟದಂತೆ ಬದುಕುವ ಹಕ್ಕು ನಮ್ಮಗಿಲ್ಲವೇ 
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪನ್ಯಾಸಕಿಯರು ನಾವು ಮನೆಯಿಂದ ಕಾಲೇಜಿಗೆ ಬರುವಾಗ ಬುರ್ಖಾ ಧರಿಸಿ ಬರುತ್ತೇವೆ. ಆದರೆ ಪಾಠ ಮಾಡಬೇಕಾದರೆ ಬುರ್ಖಾವನ್ನು ಕಳಚಿ ಸ್ಕಾರ್ಫ್ (ಮೇಲುಹೊದಿಕೆ) ಹಾಕಿಕೊಂಡು ಪಾಠ ಮಾಡುತ್ತೇವೆ. ಇದರಲ್ಲಿ ತಪ್ಪೇನಿದೆ. ನಮ್ಮ ನಂಬಿಕೆ ಇಷ್ಟದಂತೆ ಬದುಕುವ ಹಕ್ಕು ನಮಗೆ ಇಲ್ಲವೇ ಎಂದು ಪ್ರಶ್ನಿಸುತ್ತಾರೆ.

ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಅವಕಾಶ ಕೊಡುವುದಿಲ್ಲ: ಶಾಸಕ ಮಂಕಾಳ್ ವೈದ್ಯ
ಈ ಕುರಿತು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ಮಂಕಾಳ್ ವೈದ್ಯರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಸರಕಾರಿ ಕಾಲೇಜಿನಲ್ಲಿ ಎಲ್ಲವೂ ಹೊಂದಾಣಿಕೆಯಿಂದ ನಡೆಯಬೇಕು. ಇಂದು ಎ.ಸಿ.ಯವರು ಸಭೆ ಮಾಡಿದ್ದಾರೆ ಮುಂದೆ ಆಡಳಿತ ಮಂಡಳಿಯ ಸಭೆಯನ್ನು ಕರೆದು ಸೂಕ್ತ ನಿರ್ಣಯವನ್ನು ಮಾಡಲಾಗುವುದು. ಯಾವುದೇ ಕಾರಣಕ್ಕೂ ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News