‘ಕೈ’ಕಮಾಂಡ್‌ಗೆ ಕಪ್ಪ: ಸಿಎಂ ರಾಜೀನಾಮಗೆ ಒತ್ತಾಯ : ವಿಧಾನಸಭೆ ವಿಸರ್ಜನೆಗೆ ಬಿಎಸ್‌ವೈ ಆಗ್ರಹ

Update: 2017-02-24 14:18 GMT

ಬೆಂಗಳೂರು, ಫೆ. 24: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಮೇಲ್ಮನೆ ಸದಸ್ಯ ಕೆ.ಗೋವಿಂದ ರಾಜು ಹೈಕಮಾಂಡಿಗೆ ಕಪ್ಪ ಸಲ್ಲಿಕೆ ಸಂಬಂಧಿಸಿದ ಡೈರಿಯಲ್ಲಿನ ಮಾಹಿತಿ ಬರಂಗಗೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೂಡಲೇ ವಿಧಾನಸಭೆ ವಿಸರ್ಜಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿರುವ ಸತ್ಯಾಂಶ ಹೊರಬರದಿದ್ದರೆ ರಾಜಕೀಯ ನಿವೃತ್ತಿ ಆಗುವೆ ಎಂದು ಹೇಳಿದ್ದೇ. ಇದೀಗ ಡೈರಿ ಬರಂಗವಾಗಿದೆ. ಹೀಗಾಗಿ ಸಿಎಂ ನನ್ನ ಸವಾಲು ಸ್ವೀಕರಿಸಿ ವಿಧಾನಸಭೆ ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.

ಎಲ್ಲರೂ ಜನತಾ ನ್ಯಾಯಾಲಯಕ್ಕೆ ಹೋಗೋಣ. ಜನ ಯಾರನ್ನು ಬೆಂಬಲಿಸಿದ್ದಾರೆ ಎಂದು ಗೊತ್ತಾಗಲಿದೆ. ಮಹಾಶಿವರಾತ್ರಿಯ ಶುಭದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅನ್ಯಾಯವನ್ನು ಒಪ್ಪಿಕೊಂಡು ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಕೋರಿದರು.

  ಜನತೆ ತೆರಿಗೆ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ವಸೂಲಿ ಮಾಡಿ ಹೈಕಮಾಂಡ್‌ಗೆ ತಲುಪಿಸಿರುವುದು, ಯಾರಿಗೂ ಬೇಡದ ಉಕ್ಕಿನ ಸೇತುವೆ ಯೋಜನೆಯಲ್ಲಿ 65 ಕೋಟಿ ರೂ.ಲಂಚ ಸ್ವೀಕಾರದ ಬಗ್ಗೆಯೂ ಡೈರಿಯಲ್ಲಿರುವ ಮಾಹಿತಿ ಬರಂಗವಾಗಿದೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಕಪ್ಪ ಪಾವತಿಯಲ್ಲಿ ಯಾವೆಲ್ಲ ಸಚಿವರ ಪಾಲು ಎಷ್ಟು ಎನ್ನುವುದೂ ಸುದ್ಧಿ ವಾಹಿನಿಗಳು ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಬರಂಗವಾಗಿದೆ. ಇದು ಅಕ್ಷಮ್ಯ ಅಪರಾಧ. ಬಿಜೆಪಿ ಷಡ್ಯಂತರ ನಡೆಸಿದ್ದಾರೆನ್ನುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ಮೂರ್ಖತನದ ಪರಮಾವಧಿ. ಅಂಗೈ ಹುಣ್ಣಿಗೆ ಕನ್ನಡಿಯೇನೂ ಬೇಡ ಎಂದು ಟೀಕಿಸಿದರು.

ಐಟಿ ಮೇಲ್ಮನೆ ಸದಸ್ಯ ಗೋಂದರಾಜು ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಮನೆಯಿಂದಲೇ ಡೈರಿಯನ್ನು ವಶಕ್ಕೆ ಪಡೆದು ಮಹಜರ್ ಮಾಡಿದೆ. ಈ ಹಂತದಲ್ಲಿ ಗೋಂದರಾಜು ಸತ್ಯಕ್ಕೆ ದೂರವಾದ ಮಾತನಾಡಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ ಸಿಎಂ ಪರವಾಗಿ ಹೈಕಮಾಂಡಿಗೆ ಹಣ ಹಂಚಿದ್ದೇನೆ, ಇದರಲ್ಲಿ ನನ್ನದೇನೂ ಪಾತ್ರಲ್ಲ ಎಂದು ಅವರು ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಬಿಎಸ್‌ವೈ ಸಲಹೆ ಮಾಡಿದರು.

 ಸಹಾರಾ ಡೈರಿಗೂ ಈಗ ಸಿಕ್ಕಿರುವ ಡೈರಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ಸಿಕ್ಕಿರುವ ಡೈರಿಯಲ್ಲಿ ಯಾರಿಂದ ಹಣ ಪಡೆದು ಯಾರಿಗೆ ಸಂದಾಯ ಮಾಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ದಾಖಲಾಗಿವೆ. ಇದಕ್ಕಿಂತ ಬೇರೆ ದಾಖಲೆ ಅಗತ್ಯವಿಲ್ಲ. ಯಾವ್ಯಾವ ಸಚಿವರು ಇದರಲ್ಲಿ ಸಿಲುಕಿದ್ದಾರೋ ಅವರು ಅನುಭಸುತ್ತಾರೆ. ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಒಬ್ಬೊಬ್ಬರೂ ಸಾರಾವಿರು ಕೋಟಿ ರೂ.ಗಳ ಲೂಟಿ ಮಾಡಿದ್ದಾರೆ. ಈ ಇಲಾಖೆಗಳಲ್ಲಿ ಕಾಮಗಾರಿಗಳ ತನಿಖೆ ನಡೆದರೆ ಸತ್ಯ ಹೊರಬರುತ್ತದೆ ಎಂದರು.

     ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿರುವುದು 24ರಿಂದ 28 ಪುಟಗಳ ಡೈರಿ. ಆದರೆ ಅದರಲ್ಲಿ ಇನ್ನಷ್ಟು ಸಚಿವರ ಹೆಸರುಗಳು ನಮೂದಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದ ಅವರು, ರಾಜ್ಯ ಸರಕಾರ ವಿರುದ್ಧ ಬಿಜೆಪಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News