ನಾಯಿ ದಾಳಿಯಿಂದ ಬದುಕಿದ್ದ ಕಡವೆ ಮೃತ್ಯು: ಕಳ್ಳರ ಪಾಲಾದ ಬೃಹತ್ ಕೊಂಬು

Update: 2017-02-25 18:09 GMT

ಚಿಕ್ಕಮಗಳೂರು, ಫೆ.25: ಕುಡಿಯುವ ನೀರು ಮತ್ತು ಆಹಾರ ಅರಸಿ ಬಂದಿರುವ ಕಡವೆಯೊಂದು ನಾಯಿಗಳ ದಾಳಿಯಿಂದ ಸಾವಿಗೀಡಾಗಿದೆ. ಈಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ನೀರಿಲ್ಲದೆ ನಾಡಿನೊಳಗೆ ಸುಳಿದಾಡಿ ಬಂದಿದ್ದ ಕಡವೆ ಲಕ್ಯಾ ಸಮೀಪ ನಾಯಿಗಳ ನಾಯಿಗೆ ತುತ್ತಾಗಿದ್ದು, ಬೃಹತ್ ಗಾತ್ರದ ಈ ಕಡವೆಯ ಕೊಂಬು ಕಳ್ಳರ ಪಾಲಾಗಿದೆ.

ಜಿಲ್ಲೆಯಾಧ್ಯಂತ ಈ ಸಲ ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭೀಕರ ಬರಗಾಲ ಎದುರಾಗಿದೆ. ಹನಿ ಹನಿ ನೀರಿಗೂ ಜನ ಮತ್ತು ಜಾನುವಾರುಗಳ ಪರದಾಟ ಹೆಚ್ಚುತ್ತಿರುವುದಕ್ಕೆ ಇದು ಪ್ರತ್ಯಕ್ಷ ನಿದರ್ಶನವಾಗಿದೆ. ಮನಷ್ಯರು ಹನಿ ನೀರು ಸಿಗದೇ ಕೀ.ಮೀ.ಗಟ್ಟಲೇ ನಡೆದು ನೀರು ತರುತ್ತಿದ್ದರೆ, ಕಾಡು ಪ್ರಾಣಿಗಳು ಕುಡಿಯುವ ನೀರು ಅರಸಿ ನಾಡಿನೊಳಗೆ ಬರತೊಡಗಿದೆ.

ಫೆ.23ರಂದು ಸಂಜೆ ಕಾಡಿನಿಂದ ನಾಡಿಗೆ ನೀರು ಅರಸಿಕೊಂಡು ಬಂದಿದ್ದ ಕಡಿವೆ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಇಂದೂ ಕೂಡ ಕಡವೆಯೊಂದು ನಾಯಿಗಳ ದಾಳಿಗೆ ತುತ್ತಾದ ಘಟನೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕಂಡು ಬಂದಿದೆ.

  ಒಂದು ಕಡೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದರೇ ಮತ್ತೊಂದು ಕಡೆ ಕಾಡಿನಲ್ಲಿ ಪ್ರಾಣಿಗಳು ನೀರಿಗಾಗಿ ಪರದಾಡುತ್ತಿವೆ. ನಗರದ ಹೊರವಲಯದ ಲಕ್ಯಾ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಕಡವೆ ಕಾಣಿಸಿಕೊಂಡಿದೆ. ಕಾಡಿನಲ್ಲಿ ನೀರು ಸಿಗದ ಕಾರಣ ಲಕ್ಷ್ಮಿಪುರದ ಕೆರೆಗೆ ನೀರು ಕುಡಿಯಲು ಬೃಹತ್ ಗಾತ್ರದ ಕಡವೆ ಬಂದಾಗ ನಾಯಿಗಳು ದಾಳಿ ಮಾಡಿವೆ.

ಈ ಸಮಯದಲ್ಲಿ 5 ಕ್ಕೂ ಹೆಚ್ಚು ನಾಯಿಗಳು ಕಡವೆ ಮೇಲೆ ದಾಳಿ ಮಾಡಿದ್ದವು. ಆಗ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂಧಿಗಳು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಚಿಕಿತ್ಸೆ ನೀಡಿದ್ದರು. ಇಂದು ಕೂಡ ಮತ್ತೆ ಬೃಹತ್ ಗಾತ್ರದ ಕಡವೆ ನೀರಿಗಾಗಿ ಚುರ್ಚೆಗುಡ್ಡದಿಂದ ಬಂದಿದ್ದು, ಅರಣ್ಯ ಇಲಾಖೆಯ ನರ್ಸರಿಯಲ್ಲಿ ನಾಯಿ ದಾಳಿಗೊಳಗಾಗಿರುವಂತೆ ಸಾವನ್ನಪ್ಪಿದೆ.

 ಕಡವೆ ನಾಯಿಗಳ ದಾಳಿಗೆ ಸಿಲುಕಿ ಪಾರಾಗಲು ಹರಸಾಹಸಪಡುವ ಮೂಲಕ ಚುರ್ಚೆಗುಡ್ಡ ಅರಣ್ಯ ಪ್ರದೇಶ ತುಂಬಾ ಪೂರ್ತಿ ಓಡಾಡಿದೆ. ಆದರೂ ಕೂಡ ನಾಯಿಗಳ ದಾಳಿಯಿಂದ ತಪ್ಪಿಸಿ ಜೀವ ಉಳಿಸಿಕೊಳ್ಳಲು ಸಾದ್ಯವಾಗಿಲ್ಲ. ಮೊದಲ ಸಲ ನಾಯಿಗಳ ದಾಳಿಗೊಳಗಾದ ಕಡವೆಯನ್ನು ಗ್ರಾಮಸ್ಥರು ಬದುಕಿಸುವಲ್ಲಿ ಯಶಸ್ವಿಯಾಗಿದ್ದರು. ತಕ್ಷಣ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರ ನೆರವಿನೊಂದಿಗೆ ಲಕ್ಯಾ ಬಳಿ ಇರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

  ಅದೇ ಕಡವೆ ಇಂದು ಮತ್ತೆ ನಾಯಿ ದಾಳಿಗೊಳಗಾಗುವ ಮೂಲಕ ಸಾವನ್ನಪ್ಪಿದೆ. ಕಡವೆಯ ದೊಡ್ಡ ಗಾತ್ರದ ಕೊಂಬುಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ಈ ಕಡವೆ ನಾಯಿ ದಾಳಿಯಿಂದ ಸತ್ತಿದ್ದೇಯೋ ಅಥವಾ ಕಳ್ಳರು ಕೊಂಬು ಕತ್ತರಿಸಿದಾಗ ನೋವಿನಿಂದ ಸತ್ತಿದ್ದಿಯೋ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ನಾಯಿಗಳಿಂದ ಜೀವ ಉಳಿಸಿಕೊಳ್ಳಲು ಹರ ಸಾಹಸ ಪಟ್ಟು ಬದುಕಿದ್ದ ಕಡವೆ ಕಡವೆ ಸಾವನ್ನಪ್ಪಿದ್ದು ಕೊಂಬಿನ ಆಸೆಗಾಗಿ ಯಾರಾದಾರೂ ಕೊಂದಿರುವ ಸಾದ್ಯತೆ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News