ಡೈರಿಯಲ್ಲಿ ನನ್ನ ಹೆಸರು ತೋರಿಸಿದವರನ್ನು ಸನ್ಮಾನಿಸುವೆ: ಶಾಸಕ ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಫೆ.26: ಪ್ರಸ್ತುತ ಚರ್ಚೆಯಲ್ಲಿರುವ ಡೈರಿಯಲ್ಲಿ ನನ್ನ ಹೆಸರು ಇರುವುದನ್ನು ನೀವು ತೋರಿಸಿದರೆ ನಿಮಗೆ ಶಾಲು ಹೊದಿಸಿ ಸನ್ಮಾನಿಸುವೆ. ನಾನು ಯಾರಿಗೂ ಹಣ ಕೊಟ್ಟಿಲ್ಲ, ಪಡೆದಿಲ್ಲ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನನ್ನ ಶ್ರಮದಿಂದ ದುಡಿದ ಹಣವೇ ನನ್ನ ಬಳಿಯಿರುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.
ತಾಲೂಕಿನ ಬೆಳವನೂರು ಗ್ರಾಮದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲು ಡೈರಿ ವಿಚಾರಗಳಿವೆ. ವಿನಾಕಾರಣ ಆರೋಪ ಪ್ರತ್ಯಾರೋಪ ಮಾಡಲಾಗುತ್ತಿದೆ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಉಗ್ರಪ್ಪ ಸೇರಿದಂತೆ ಎಲ್ಲರೂ ತಲೆಗೊಂದರಂತೆ ಮಾತನಾಡುತ್ತಿದ್ದಾರೆ. ಇದರಿಂದ ರಾಜ್ಯದ ಜನರಿಗೆ ಮುಜುಗರವೆನಿಸಿದರೆ, ರಾಜಕಾರಣಿಗಳಿಗೆ ಮಜವೆನಿಸಿದೆ ಎಂದರು.
ನನಗೆ ಮುತ್ತಿಗೆ ಹಾಕಲು ಬಿಜೆಪಿಗೆ ಧೈರ್ಯವೆಲ್ಲಿದೆ?
ನನ್ನ ಬಳಿ ಬಂದು ಮುತ್ತಿಗೆ ಅಥವಾ ಪ್ರತಿಭಟನೆ ನಡೆಸುವ ಧೈರ್ಯ ಬಿಜೆಪಿಯವರಿಗೆ ಎಲ್ಲಿದೆ? ಅವರದ್ದೇನಿದ್ದರೂ ಸರ್ಕಲ್, ಠಾಣೆ ಎದುರು ಮಾತ್ರ ಪ್ರತಿಭಟಿಸಲು ಸಾಧ್ಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಆ ಧೈರ್ಯ ಎಂದಿಗೂ ಬರುವುದಿಲ್ಲ. ಅವರದ್ದೇನಿದ್ದರೂ ನಮ್ಮ ಬಳಿ ನಡೆಯುವುದಿಲ್ಲ ಎಂದ ಅವರು, ಈ ಬಾರಿಯೂ ಜನರ ಇಚ್ಛೆಯಂತೇ ದಕ್ಷಿಣ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಸ್ಪಷ್ಟಪಡಿಸಿದರು.
ನಮಗೆಂದು ಅವಮಾನವಾಗಿಲ್ಲ:
ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿಗಳಿಗೆ ಅಗೌರವ, ಅವಮಾನ ಎಂದಿಗೂ ಮಾಡಿಲ್ಲ. ಕೆಲವರು ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಹಿರಿಯರ ಸಭೆ ನಡೆಯಲಿದ್ದು, ಅಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದ ಅವರು, ಸಚಿವ ಸಂಪುಟ ಪುನರಚನೆ ಸಧ್ಯಕ್ಕಿಲ್ಲ. ಇದು ಮಾದ್ಯಮಗಳ ಊಹಾಪೋಹವಷ್ಟೇ ಎಂದರು.