ಪರವಾನಿಗೆ ರಹಿತ ಬಹುಮಹಡಿ ಸಂಕೀರ್ಣ ಶಿವಮೊಗ್ಗ ಮನಪಾ ವಿರುದ್ಧ ಎಸಿಬಿಗೆ ದೂರು: ವಿನೋದ್

Update: 2017-02-27 17:40 GMT

ಶಿವಮೊಗ್ಗ, ಫೆ.27: ನಗರದ ಕುವೆಂಪು ರಸ್ತೆಯಲ್ಲಿ ಪರವಾನಿಗೆ ಪಡೆಯದೆ, ಮನಪಾದ ನಿಯಮ ಉಲ್ಲಂಘಿಸಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಬೃಹತ್ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಇದರಿಂದ ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ಆದಾಯ ನಷ್ಟವಾಗಿದ್ದು, ಇದರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದು ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಹೋರಾಟಗಾರರು ಹಾಗೂ ವಕೀಲ ವಿನೋದ್ ದೂರಿದ್ದಾರೆ.

ಸೋಮವಾರ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಸ್ತುತ ನಗರದಲ್ಲಿ ಎರಡು ಅನದಿಕೃತ ಬಹುಮಹಡಿ ಕಟ್ಟಡಗಳ ನಿರ್ಮಾಣ ಗೊಂಡಿದ್ದು, ಇದಕ್ಕೆ ಪಾಲಿಕೆ ಆಯುಕ್ತರೇ ನೇರ ಹೊಣೆಗಾರರಾಗಿದ್ದಾರೆ. ಅವರ ವಿರುದ್ಧವೂ ನೀಡಲಿ ನಿರ್ಧರಿಸಲಾಗಿದೆ. ಜೊತೆಗೆ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪರವಾನಿಗೆ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದರೆ ತಲಾ ಒಂದು ಕಟ್ಟಡಕ್ಕೆ ಸುಮಾರು 7 ಲಕ್ಷ ರೂ. ಶುಲ್ಕವನ್ನು ಸಂಬಂಧಿಸಿದವರು ಪಾಲಿಕೆಗೆ ಕಟ್ಟಬೇಕಾಗಿತ್ತು. ಆದರೆ, ಈ ಪ್ರಕರಣದಲ್ಲಿ ಪಾಲಿಕೆಯು ಸಂಬಂಧಿಸಿದವರಿಂದ ಕೇವಲ 54 ಸಾವಿರ ರೂ. ದಂಡ ಪಾವತಿಸಿಕೊಂಡು ಸುಮ್ಮನಾಗಿದೆ ಎಂದು ವಕೀಲ ವಿನೋದ್ ಆಪಾದಿಸಿದ್ದಾರೆ.

ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಸಾರ್ವಜನಿಕ ಹಿತಾಸಕ್ತಿಯ ನೋಟಿಸ್ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಕೂಡ ರವಾನೆಯಾಗಿದೆ. ಆದರೆ, ಆಯುಕ್ತರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ. ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಮನಪಾದ ನಿಯಮ ಉಲ್ಲಂಘಿಸಿ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ.

ಆದರೆ, ಇಂತಹವರ ವಿರುದ್ಧ ಸ್ಥಳೀಯಾಡಳಿತ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಕಾನೂನುಬಾಹಿರ ಕಟ್ಟಡ ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News