×
Ad

ರಿವಾಲ್ವಾರ್ ಕೈಗೆತ್ತಿಕೊಂಡ ಪಿಎಸೈನನ್ನು ಥಳಿಸಿದ ಗ್ರಾಮಸ್ಥರು: 7 ಮಂದಿ ಗ್ರಾಮಸ್ಥರ ಬಂಧನ

Update: 2017-02-28 16:57 IST

ಚಿಕ್ಕಮಗಳೂರು, ಫೆ.28: ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಿನಿಂದ ಕೆಳಗಿಳಿದ ಪಿಎಸೈ ಗವಿರಾಜ್‌ರನ್ನು 20 ಮಂದಿಯ ತಂಡವೊಂದು ಥಳಿಸಿದ ಬಳಿಕ ಮನೆಯೊಂದರಲ್ಲಿ ಕೂಡಿ ಹಾಕಿದ ಘಟನೆ ನಗರದ ಹೊರ ವಲಯದ ಮೂಗ್ತಿಹಳ್ಳಿ ಬಳಿಯ ಶಿರಗುಂದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

ಹಲ್ಲೆ ಸಂಬಂಧ ಕಾರಿನ ಮಾಲಿಕ ಆಲದಗುಡ್ಡೆಯ ನಟರಾಜ್(34), ದುಂಬಿಗೆರೆಯ ಲಕ್ಷ್ಮಣ್ ಗೌಡ(37), ಚಿಕ್ಕಮಗಳೂರಿನ ಪುಷ್ಪಕ್ ಅಲಿಯಾಸ್ ಪವನ್(25), ಆಣೂರು ಗ್ರಾಮದ ಶಶಿ ಹೆಚ್.ಸಿ.(30), ಶಿರಗುಂದ ಮನು ಎಸ್.ಎನ್.(38), ಕಟ್ಟೆಗದ್ದೆ ರವೀಂದ್ರ(35), ಮತ್ತಾವರದ ಎಂ.ಸಿ.ಚೇತನ್(28) ಎಂಬವರನ್ನು ಬಂಧಿಸಲಾಗಿದೆ.

ಆರೋಪಿಗಳಿಗೆ ಸಹಕರಿಸಿದ ಆರೋಪದನ್ವಯ ಇನ್ನೂ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಎಸ್ಪಿ ಕಚೇರಿ ತಿಳಿಸಿದೆ.

ಘಟನೆ ವಿವರ:

ಚಿಕ್ಕಮಗಳೂರು ಗ್ರಾಮಾಂತರ ಪಿಎಸೈ ಗವಿರಾಜ್, ಸಿಬ್ಬಂದಿ ನಂಜಪ್ಪ, ಕುಮಾರಪ್ಪ ಮಫ್ತಿಯಲ್ಲಿಯೂ ದಿನೇಶ್ ಮತ್ತು ರುದ್ರೇಶ್ ಪೊಲೀಸ್ ಸಮವಸ್ತ್ರದಲ್ಲಿಯೂ ಖಾಸಗಿ ಕಾರಿನಲ್ಲಿ ಬಸ್ಕಲ್ ಗ್ರಾಮಕ್ಕೆ ಕರ್ತವ್ಯದ ನಿಮಿತ್ತ ತೆರಳಿ ಹಿಂತಿರುಗುತ್ತಿದ್ದರು.

ಈ ವೇಳೆ ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173ರ ಶಿರಗುಂದ ಎಂಬಲ್ಲಿ ಬರುತ್ತಿದ್ದಂತೆ ನಟರಾಜ್ ಚಲಾಯಿಸುತ್ತಿದ್ದ ಕಾರನ್ನು ಯಾವುದೇ ಮುನ್ಸೂಚನೆ ನೀಡದೆ ನಿಲ್ಲಿಸಿದ್ದರಿಂದ ಹಿಂಬದಿಯಲ್ಲಿ ಚಲಿಸುತ್ತಿದ್ದ ಪಿಎಸೈ ಗವಿರಾಜ್ ಚಲಾಯಿಸುತ್ತಿದ್ದ ಖಾಸಗಿ ಕಾರು ಢಿಕ್ಕಿ ಹೊಡೆದಿದೆ. ಈ ಸಂದರ್ಭ ಕಾರಿನಿಂದ ಇಳಿದ ನಟರಾಜ್ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾಗಿ ಪಿಎಸೈ ಗವಿರಾಜ್ ದೂರಿನಲ್ಲಿ ತಿಳಿಸಿದ್ದಾರೆ.

   ಅವಘಡದ ನಂತರ ಕೆಳಗಿಳಿದ ಗವಿರಾಜ್ ನಾನು ಗ್ರಾಮಾಂತರ ಠಾಣೆಯ ಪಿಎಸೈ ಅಂತ ಹೇಳಿಕೊಂಡಿದ್ದರು. ಆದರೆ ಅಷ್ಟಕ್ಕೆ ಬಿಟ್ಟು ಬಿಡದ ನಟರಾಜ್ ಮತ್ತು ತಂಡದವರು ಪಿಎಸೈ ಗವಿರಾಜ್ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿ ನೋಡಲು ಬಂದವರು ಕೂಡ ಪಿಎಸೈ ಮೇಲೆ ಒಂದೊಂದು ಏಟು ಹಾಕಿದ್ದರು. ಹಲ್ಲೆಕೋರರ ಸಂಖ್ಯೆ ಹೆಚ್ಚುತ್ತಿದ್ದಂತೆ ಜೇಬಿನಿಂದ ರಿವಾಲ್ವಾರ್ ತೆಗೆದಿದ್ದರಿಂದ ಸ್ಥಳದಲ್ಲಿದ್ದವರು ಗವಿರಾಜ್ ಮೇಲೆ ಇನ್ನಷ್ಟು ಹಲ್ಲೆ ನಡೆಸಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.

  ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪಿಎಸೈ ಗವಿರಾಜ್ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಬಂದು ಗವಿರಾಜ್‌ರನ್ನು ಜನರಿಂದ ಬಿಡಿಸಿದ್ದಾರೆ.

  ಪಿಎಸೈ ಗವಿರಾಜ್ ರಿವಾಲ್ವಾರ್ ತೆಗೆದಿದ್ದು ತಪ್ಪು ಮಾಡುವ ಮೂಲಕ ಜನರನ್ನು ಕೆರಳಿದ್ದಾರೆ ಎಂದು ಗ್ರಾಮಸ್ಥರು 2 ಗಂಟೆಗೂ ಅಧಿಕ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಸ್ಥಳಕ್ಕೆ ಜಿಲ್ಲಾ ಎಸ್ವಿ ಕೆ.ಅಣ್ಣಮಲೈ ಗ್ರಾಮಸ್ಥರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದೂ ತಿಳಿ ಹೇಳಿದರೂ ಸ್ಥಳೀಯರು ಕೇಳದಿದ್ದಾಗ ಅನಿವಾರ್ಯವಾಗಿ ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.

  ಆರೋಪಿಗಳ ಮೇಲೆ ಮೊ.ಸಂಖ್ಯೆ 89/2017 ಕಲಂ 143, 147, 341, 353, 332, 504, 506 ಸಹಿತ 149 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಪಿಎಸೈ ಗವಿರಾಜ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News