ಶಾಲಾ ಬಾಲಕಿಯರನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು!
ಶಿವಮೊಗ್ಗ, ಫೆ. 28: ಇಬ್ಬರು ಶಾಲಾ ಬಾಲಕಿಯರನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿಯೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶಿವಮೊಗ್ಗ ನಗರದ ಟಿಪ್ಪುನಗರ ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ವರದಿಯಾಗಿದೆ.
ವಿನೋಬನಗರದ ನಿವಾಸಿ, ಚಾಲಕ ವೃತ್ತಿ ಕೆಲಸ ಮಾಡುವ ಹುಚ್ಚುರಾಯ (32) ಆರೋಪಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಸಬ್ ಇನ್ಸ್‌ಪೆಕ್ಟರ್ ಬಿ.ಸಿ.ಗಿರೀಶ್‌ರವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಏನಾಯ್ತು?:
ವಿನೋಬನಗರದ ಪ್ರೌಢಶಾಲೆಯೊಂದರಲ್ಲಿ 9 ನೆ ತರಗತಿ ಅಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರನ್ನು ಆರೋಪಿಯು ತನ್ನ ಬೈಕ್‌ನಲ್ಲಿ ಕರೆತಂದಿದ್ದಾನೆ. ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದ ಓರ್ವ ವಿದ್ಯಾರ್ಥಿನಿಗೆ ಬುರ್ಖಾ ಹಾಕಿಸಿದ್ದಾನೆ. ಮತ್ತೋರ್ವ ವಿದ್ಯಾರ್ಥಿನಿ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಳು.
ಟಿಪ್ಪುನಗರ ಮುಖ್ಯ ರಸ್ತೆಯಲ್ಲಿ ಆರೋಪಿಯು ಬೈಕ್‌ನಲ್ಲಿ ವಿದ್ಯಾರ್ಥಿನಿಯರೊಂದಿಗೆ ತೆರಳುತ್ತಿದ್ದಾಗ ಅನುಮಾನದ ಮೇರೆಗೆ ಸ್ಥಳೀಯರು ಬೈಕ್ ನಿಲ್ಲಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಬೈಕ್ ನಿಲ್ಲಿಸದೆ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದು ಬೆನ್ನಟ್ಟಿ ಹಿಡಿದು ನಿಲ್ಲಿಸಿದ್ದಾರೆ.
ತದನಂತರ ವಿಚಾರಣೆ ನಡೆಸಿದಾಗ ವಿದ್ಯಾರ್ಥಿನಿಯರು ಹೈಸ್ಕೂಲ್‌ವೊಂದರಲ್ಲಿ 9 ನೆ ತರಗತಿ ಅಭ್ಯಾಸ ಮಾಡುತ್ತಿರುವುದು ಗೊತ್ತಾಗಿದ್ದು, ಆರೋಪಿಯು ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ಕರೆತಂದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ತದನಂತರ ಸಾರ್ವಜನಿಕರೇ ಆರೋಪಿ ಹಾಗೂ ಈರ್ವರು ವಿದ್ಯಾರ್ಥಿನಿಯರನ್ನು ತುಂಗಾನಗರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ:
ಬಾಲಕಿಯರನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿತ್ತು ಎಂಬುವುದರ ಬಗ್ಗೆ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಲಕಿಯರ ಪೋಷಕರು, ಸಂಬಂಧಿಸಿದ ಶಾಲೆಯವರಿಗೆ ಮಾಹಿತಿ ರವಾನಿಸಿದ್ದಾರೆ.
ಆರೋಪಿಗೂ ವಿದ್ಯಾರ್ಥಿನಿಯರಿಗೂ ಪರಿಚಯವಿತ್ತೆ? ಕರೆದೊಯ್ಯುತ್ತಿದ್ದುದು ಎಲ್ಲಿಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯ ನಂತರವಷ್ಟೆ ಉತ್ತರ ಸಿಗಬೇಕಾಗಿದೆ. ಒಟ್ಟಾರೆ ನಾಗರಿಕರ ಸಕಾಲಿಕ ಸಮಯ ಪ್ರಜ್ಞೆಯಿಂದ ಈರ್ವರು ಬಾಲಕಿಯರು ರಕ್ಷಣೆಯಾಗಿದ್ದಂತೂ ಸತ್ಯವಾಗಿದೆ.