ಆರ್‌ಟಿಒ ಇನ್‌ಸ್ಪೆಕ್ಟರ್ ಕಚೇರಿ, ಮನೆಗಳ ಮೇಲೆ ಎಸಿಬಿ ದಾಳಿ
ಶಿವಮೊಗ್ಗ, ಫೆ.28: ಶಿವಮೊಗ್ಗ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಮಂಗಳವಾರ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದ ಪೊಲೀಸರು, ಆರ್‌ಟಿಒ ಇನ್‌ಸ್ಪೆಕ್ಟರ್ ಒಬ್ಬರಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.
ಮೂಲತಃ ಶಿವಮೊಗ್ಗದ ವಿನೋಬನಗರದ ನಿವಾಸಿಯಾಗಿರುವ ಪ್ರಸ್ತುತ ಚಿತ್ರದುರ್ಗದ ಆರ್‌ಟಿಒ ಕಚೇರಿಯಲ್ಲಿ ಒಒಡಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಸ್.ಬಿ. ಕರುಣಾಕರ ಎಂಬವರೇ ಎಸಿಬಿ ದಾಳಿಗೊಳಗಾದ ಆರ್‌ಟಿಒ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ವಿನೋಬನಗರ 60 ಅಡಿ ರಸ್ತೆಯಲ್ಲಿರುವ ನಿವಾಸ, ಚಿತ್ರದುರ್ಗದಲ್ಲಿ ಅವರು ಕಾರ್ಯನಿರ್ವಹಿಸುತ್ತಿರುವ ಆರ್‌ಟಿಒ ಕಚೇರಿ ಹಾಗೂ ಮನೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯಲ್ಲಿರುವ ತೋಟದ ಮನೆಯ ಮೇಲೆ ಎಸಿಬಿ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಎಸಿಬಿ ಡಿವೈಎಸ್ಪಿ ಎ. ಚಂದ್ರಪ್ಪ ಅವರ ನೇತೃತ್ವದ ಎಸಿಬಿ ತಂಡ ಶಿವಮೊಗ್ಗದ ನಿವಾಸದ ಮೇಲೆ ನಡೆದ ದಾಳಿ ನಡೆಸಿದ್ದು, ದಾವಣಗೆರೆ ಎಸಿಬಿ ಎಸ್ಪಿ ಪುಟ್ಟಮಾದಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಇಬ್ಬರು ಡಿವೈಎಸ್ಪಿಗಳು, ಮೂವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು 25 ಕ್ಕೂ ಅಧಿಕ ಸಿಬ್ಬಂದಿಯನ್ನೊಳಗೊಂಡ ಎಸಿಬಿ ತಂಡ ಬೆಳಗ್ಗಿನಿಂದ ಸತತ ಮಧ್ಯಾಹ್ನದ ವರೆಗೂ ಶೋಧಕಾರ್ಯಾಚರಣೆ ನಡೆಸಿ ಚಿತ್ರದುರ್ಗದ ಆರ್‌ಟಿಒ ಇನ್‌ಸ್ಪೆಕ್ಟರ್ ಎಸ್.ಬಿ. ಕರುಣಾಕರ ಅವರು ಅಕ್ರಮವಾಗಿ ಗಳಿಸಿದ್ದರೆನ್ನಲಾಗದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತು ಮತ್ತು ದಾಖಲೆಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಕಾರ್ಯಾಚರಣೆ: ಆರ್‌ಟಿಒ ಇನ್‌ಸ್ಪೆಕ್ಟರ್ ಎಸ್.ಬಿ.ಕರುಣಾಕರ ಅವರು ಆದಾಯಕ್ಕೂ ಮೀರಿದ ಸಂಪತ್ತು ಗಳಿಸಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕೆಂದು ಶಿವಮೊಗ್ಗದ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ವಿನೋದ್ ಎಸಿಬಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದರು.
ದೂರಿನ ಪ್ರತಿಯೊಂದಿಗೆ ಎಸ್.ಬಿ.ಕರುಣಾಕರರವರು ಗಳಿಸಿದ್ದ ಅಕ್ರಮ ಸಂಪತ್ತಿನ ವಿವರಗಳ ಮಾಹಿತಿಯನ್ನೂ ನೀಡಿದ್ದರು ಎನ್ನಲಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಅನ್ವಯ ಇವರ ವಿರುದ್ಧ ಪ್ರಕರಣ ದಾಖಲಿಸಿ, ಅವರ ಆಸ್ತಿಪಾಸ್ತಿಗಳ ತನಿಖೆ ನಡೆಸುವಂತೆ ಎಸಿಬಿಗೆ ಸಲ್ಲಿಸಿದ್ದ ದೂರಿನಲ್ಲಿ ವಕೀಲ ವಿನೋದ್ ಮನವಿ ಮಾಡಿದ್ದರು.
ಈ ದೂರಿನ ಆಧಾರದ ಮೇಲೆ ಎಸಿಬಿ ಪೊಲೀಸರು ಮಂಗಳವಾರ ಕರುಣಾಕರ ಅವರ ಮೂರು ಮನೆಗಳು ಹಾಗೂ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಮಾಡಿದ್ದರೆನ್ನಲಾದ ಕೋಟ್ಯಂತರ ರೂ. ಮೌಲ್ಯದ ಚರಾಸ್ತಿ ಸ್ಥರಾಸ್ತಿ ಪತ್ತೆಯಾಗಿವೆ ಎಂದು ಹೇಳಲಾಗಿದೆ.