ಹುಲಿಕೆರೆ ಸ್ವಾಮೀಜಿಯ ಅಡ್ಡಗಟ್ಟಿ ದರೋಡೆ?
ಚಿಕ್ಕಮಗಳೂರು, ಫೆ. 28: ಕಡೂರು ತಾಲೂಕಿನ ಹುಲಿಕೆರೆಯ ಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ನಾಲ್ವರು ಮುಸುಕುಧಾರಿಗಳು ಅಡ್ಡಗಟ್ಟಿ ಹಣ, ಪೂಜಾ ಸಾಮಗ್ರಿಗಳು ಮತ್ತು ಮಹತ್ವದ ದಾಖಲೆಗಳಿದ್ದ ಸೂಟ್‌ಕೇಸನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಘಟನೆಯ ಹಿನ್ನೆಲೆ: ರವಿವಾರ ರಾತ್ರಿ 10:30ರ ಸುಮಾರಿಗೆ ಶಿವಮೊಗ್ಗದಿಂದ ಕಡೂರು ಮಾರ್ಗದ ಹುಲಿಕೆರೆ ಮಠಕ್ಕೆ ಸ್ವಾಮೀಜಿ ಪ್ರಯಾಣ ಮಾಡುತ್ತಿದ್ದ ವೇಳೆ ಕಡೂರು ಸಮೀಪದ ಬುಕ್ಕಸಾಗರ ಉತ್ತರಮುಖಿ ಆಂಜನೇಯ ಸ್ವಾಮಿ ದೇಗುಲದ ಬಳಿ 2 ಬೈಕ್‌ಗಳಲ್ಲಿ ಬಂದ ನಾಲ್ವರು ಮುಸುಕುದಾರಿಗಳು ಕಾರನ್ನು ಅಡ್ಡಗಟ್ಟಿ ಕಾರಿನ ಗಾಜನ್ನು ಕಲ್ಲಿನಿಂದ ಒಡೆದು ಒಳಗಿದ್ದವರ ಮುಖಕ್ಕೆ ಖಾರದ ಪುಡಿ ಎರಚಿ ಕಾರಿನಲ್ಲಿದ್ದ ಪೂಜಾ ಸಾಮಗ್ರಿಗಳು, 1 ಲಕ್ಷ ರೂ. ಮತ್ತು ಮಹತ್ವದ ದಾಖಲೆಗಳಿದ್ದ ಸೂಟ್ ಕೇಸನ್ನು ತೆಗೆದು ಪರಾರಿಯಗಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
‘ಕಾರಿನಲ್ಲಿ ಡ್ರೈವರ್ ಯೂನಿಸ್ ಮತ್ತು ನಾನು ಇಬ್ಬರೇ ಇದ್ದೆವು. ಗಾಬರಿಯಲ್ಲಿ ಬೈಕ್ ನಂಬರ್ ಬರೆದುಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದೆವು. ಆದರೆ, ಯಾರ ಮೇಲೂ ದೂರು ದಾಖಲಿಸಿಲ್ಲ ಎಂದು ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಮಠಕ್ಕೆ ಸೇರಿದ ಜಮೀನಿನ ಬಗ್ಗೆ ಹಲವು ವರ್ಷಗಳಿಂದ ವಿವಾದವಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ. ನಮಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.