ಕೆರೆಗಳ ಉಳಿವಿಗೆ ಪರಿಸರ ಪ್ರೇಮಿಗಳ ನೇತೃತ್ವದಲ್ಲಿ ಇಂದು ಧರಣಿ
ಶಿವಮೊಗ್ಗ, ಮಾ.1: ಕೆರೆಗಳನ್ನು ಉಳಿಸುವಂತೆ ಆಗ್ರಹಿಸಿ ಮಾ.2ರಂದು ಬೆಳಗ್ಗೆ 11 ಗಂಟೆಗೆ ನಗರದ ನವಿಲೆ ಕೆರೆ ಅಂಗಳದಲ್ಲಿ ಪರಿಸರ ಪ್ರೇಮಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪರಿಸರ ಪ್ರೇಮಿಗಳ ಒಕ್ಕೂಟದ ಮುಖ್ಯಸ್ಥ ಎಲ್.ಕೆ. ಶ್ರೀಪತಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆರೆಗಳು ಜೀವ ಸೆಲೆಗಳಿದ್ದಂತೆ. ಅವುಗಳನ್ನು ಸಂರಕ್ಷಣೆಮಾಗುವ ಬದಲು ಇಲ್ಲದಂತೆ ಮಾಲಾಗುತ್ತಿದೆ. ಕಣ್ಣೆದುರಿಗೆ ಕೆರೆಗಳು ನಾಶವಾಗುತ್ತಿದ್ದರೂ ಏನೂ ಮಾಡದ ಸ್ಥಿತಿಗೆ ತಲುಪುತ್ತಿರುವುದು ವಿಪರ್ಯಾಸವೇ ಸರಿ. ಈ ನಿಟ್ಟಿನಲ್ಲಿ ಕೆರೆಗಳನ್ನು ಉಳಿಸುವ ಚಳವಳಿಯನ್ನು ಪರಿಸರ ಪ್ರೇಮಿಗಳ ಒಕ್ಕೂಟ ಮಾಡಲಿದೆ ಎಂದರು.
ನವಿಲೆ ಕೆರೆ ಬಳಿ ನಾಳೆ ಬೆಳಗ್ಗೆ 11 ಗಂಟೆಗೆ ಎಲ್ಲ ಪ್ರಜ್ಞಾವಂತ ನಾಗರಿಕರು, ಸಂಘಸಂಸ್ಥೆಗಳು, ಪರಿಸರ ಆಸಕ್ತರು ಸೇರಿ ನವಿಲೆ ಕೆರೆ ಉಳಿಸಿ ಚಳವಳಿ ಆರಂಭಿಸಲಾಗುತ್ತದೆ. ಸುಮಾರು 34 ಎಕರೆ ಇದ್ದ ಈ ಕೆರೆ ಕ್ರೀಡಾಂಗಣಕ್ಕಾಗಿ 27 ಎಕರೆ ಬಿಟ್ಟುಕೊಟ್ಟು ಈಗ ಉಳಿದ ನಾಲ್ಕೈದು ಎಕರೆ ಕೂಡ ರಸ್ತೆ ಮಾಡುವ ನೆಪದಲ್ಲಿ ಮುಚ್ಚಲು ಹೊರಟಿರುವುದು ಖಂಡನೀಯ ಎಂದರು.
ರಸ್ತೆ ಬೇಕು ನಿಜ. ಆದರೆ ಕೆರೆಗಳನ್ನು ಮುಚ್ಚಿ ರಸ್ತೆ ಮಾಡುವುದು ಸರಿಯಲ್ಲ. ಒಂದಿಷ್ಟು ರಸ್ತೆ ಡೊಂಕಾದರೂ ಚಿಂತೆ ಇಲ್ಲ. ಇರುವ ಜಾಗವನ್ನು ಬಳಸಿಕೊಂಡು ಕೆರೆ ಮುಚ್ಚದೇ ರಸ್ತೆ ಮಾಡುವ ಅವಕಾಶವಿದ್ದರೂ ಕೂಡ ಅಧಿಕಾರಿಗಳು ಕೆರೆ ಮುಚ್ಚಲು ಹೊರಟಿರುವುದು ಸರಿಯಲ್ಲ.
ರಸ್ತೆ ಅಕ್ಕಪಕ್ಕದ ಸ್ವಲ್ಪ ಜಾಗ ಮಾತ್ರ ಬಳಸಿಕೊಂಡರೆ ಉಳಿದ ಕೆರೆ ಉಳಿಸಿಕೊಳ್ಳಬಹುದು. ಜಲರಾಶಿಗಳನ್ನು ಕಳೆದುಕೊಂಡು ಅಂತರ್ಜಲ ಕುಸಿತಕ್ಕೆ ಜನರೇ ಕಾರಣರಾಗುವುದು ಸರಿಯಲ್ಲ ಎಂದರು. ಪರಿಸರ ನಾಗರಾಜ್, ಕೆ.ವಿ. ವಸಂತ್ ಕುಮಾರ್, ಯೋಗ ಗುರು ರುದ್ರರಾಧ್ಯ, ಮಹದೇವಸ್ವಾಮಿ, ಅನಂತ ಶಾನುಭಾಗ್ ಮತ್ತಿತರರು ಉಪಸ್ಥಿತರಿದ್ದರು.