×
Ad

ಗೆಜೆಟಡ್ ಪ್ರೊಬೇಷನರಿ ಹುದ್ದೆ ನೇಮಕಾತಿ: ಮೇಲ್ಮನವಿ ಸಲ್ಲಿಸದಿರಲು ಕೈಗೊಂಡ ತೀರ್ಮಾನಕ್ಕೆ ಎಸ್ ಡಿಪಿಐ ಸ್ವಾಗತ

Update: 2017-03-02 16:33 IST

ಬೆಂಗಳೂರು, ಮಾ.02: ಕರ್ನಾಟಕ ಲೋಕಸೇವಾ ಆಯೋಗ  2011ನೇ ಸಾಲಿನ 362 ಗೆಜೆಟಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ವಿಷಯದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರಕಾರ ಕೈಗೊಂಡ ತೀರ್ಮಾನವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್‌ರವರು ಸ್ವಾಗತಿಸಿದ್ದಾರೆ ಮತ್ತು ಇದು ಸತ್ಯಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.

ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ 2011ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ದಲಿತ, ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಸುಮಾರು 72 ದಲಿತ ಮತ್ತು 29 ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು, ಅಹಿಂದ ವರ್ಗಗಳ ಈ ಗೆಲವು ಸಹಿಸದೆ ಈ ಅಭ್ಯರ್ಥಿಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.

ಆಗ ಎಸ್.ಡಿ.ಪಿ.ಐ ಸೇರಿದಂತೆ ಬಿ.ಎಸ್.ಪಿ, ರಾಜ್ಯ ರೈತ ಸಂಘ, ಡಿ.ಎಸ್.ಎಸ್ ಮುಂತಾದ ಜನಪರ ಸಂಘಟನೆಗಳು ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಹಲವು ದಿನಗಳ ಕಾಲ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ಈ ನೇಮಕಾತಿ ಬಗ್ಗೆ ಸಿ.ಐ.ಡಿ ತನಿಖೆ ನಡೆದರೂ ಸಿ.ಐ.ಡಿ ತನಿಖೆಯಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂದು ನಿರ್ದಿಷ್ಟ ವ್ಯಕ್ತಿಗಳ ಹೆಸರಿಸಿರುವುದಿಲ್ಲ. ಈ ಬಗ್ಗೆ ಪ್ರಗತಿಪರ ಹೊರಾಟಗಾರರು ಸರ್ಕಾರಕ್ಕೆ ಹಲವು ಮನವಿ ಕೂಡ ಸಲ್ಲಿಸಿದರು. ಆದರೆ ಯಾವುದೊ ಒತ್ತಡಕ್ಕೆ ಮಣಿದ ಸರ್ಕಾರ ನೇಮಕಾತಿ ಆದೇಶ ರದ್ದು ಪಡಿಸಿ 362 ಅಭ್ಯರ್ಥಿಗಳಿಗೆ ಆಘಾತ ನೀಡಿತ್ತು. ಸುಮಾರು 3ರಿಂದ 4 ವರ್ಷಗಳ ಕಠಿಣ ಪರಿಶ್ರಮ ವಹಿಸಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಈ ಪ್ರತಿಭಾವಂತ ಅಭ್ಯರ್ಥಿಗಳಿಗೆ ಬಹುದೊಡ್ಡ ಅನ್ಯಾಯವಾಗಿತ್ತು.

2016ರ ಆಕ್ಟೋಬರ್ ತಿಂಗಳಿನಲ್ಲಿ 2011ನೇ ಸಾಲಿನಲ್ಲಿ ಮಾಡಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ರದ್ದುಗೊಳಿಸಿದ್ದ ರಾಜ್ಯ ಸರಕಾದ ಆದೇಶವನ್ನು ಅಸಿಂಧುಗೊಳಿಸಿರುವ ಕೆ.ಎ.ಟಿಯ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಪುನರ್‌ಪರಿಶಿಲನ ಮನವಿ ಸಲ್ಲಿಸಬಾರದೆಂದು ಆಗ ಎಸ್.ಡಿ.ಪಿ.ಐ ಮುಖ್ಯಮಂತ್ರಿ ಹಾಗೂ ಕೆಲ ಸಚಿವರಿಗೆ ಮನವಿ ಸಲ್ಲಿಸಿತು. ಕೆ.ಎ.ಟಿಯಿಂದ ನ್ಯಾಯ ಪಡೆದ ಈ 362 ಅಭ್ಯರ್ಥಿಗಳಿಗೆ ಹಾಗೂ ಇದರ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನವನ್ನು ಕೈಗೊಂಡಿರುವ ರಾಜ್ಯ ಸರ್ಕಾರವನ್ನು ಎಸ್.ಡಿ.ಪಿ.ಐ ಪಕ್ಷವು ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News