×
Ad

ಅಸಲಿ ಬಂಗಾರ ತೋರಿಸಿ ಖರೀದಿಗೆ ಬಂದವರನ್ನು ಹಲ್ಲೆ ಮಾಡಿದ ನಕಲಿ ಬಂಗಾರ ವಂಚಕರು!

Update: 2017-03-02 17:10 IST

ಸಾಗರ, ಮಾ.2: ಅಸಲಿ ಬಂಗಾರ ತೋರಿಸಿ, ಖರೀದಿಗೆ ಬರುವಂತೆ ಹೇಳಿ ಅವರ ಮೇಲೆ ಹಲ್ಲೆ ನಡೆಸಿ 1.20 ಲಕ್ಷ ರೂ. ವಂಚಿಸಿದ ಘಟನೆ ಸೋಮವಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಅಶೋಕ ರಸ್ತೆಯ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಸಮೀಪ ಚಿನ್ನಬೆಳ್ಳಿ ವ್ಯಾಪಾರ ಮಾಡುವ ಕಿರಣ್ ಎ. ಶೇಟ್ ಎಂಬವವರನ್ನು ಶಿವಮೊಗ್ಗದ ನಾಗರಾಜ್ ಎಂಬಾತ ಭೇಟಿ ಮಾಡಿ, ತಮ್ಮ ಹತ್ತಿರ ಪುರಾತನ ಕಾಲದ ಚಿನ್ನದ ನಾಣ್ಯವಿದೆ. ಶಿವಮೊಗ್ಗಕ್ಕೆ ಬಂದರೆ ಅದನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ.

ನಾಗರಾಜ ಅವರ ಮಾತನ್ನು ನಂಬಿದ ಕಿರಣ್ ಎ. ಶೇಟ್ ಅವರು ತಮ್ಮ ಸ್ನೇಹಿತ ವೀರಾಚಾರ್ಯ ಎಂಬುವವರ ಜೊತೆ ಶಿವಮೊಗ್ಗಕ್ಕೆ ಹೋಗಿದ್ದಾರೆ. ಅಲ್ಲಿ ನಾಗರಾಜ್ ಒಂದು ಬಂಗಾರದ ಚಿಕ್ಕ ಬಿಲ್ಲೆಯನ್ನು ನೀಡಿದ್ದಾರೆ. ಇದನ್ನು ಪರೀಕ್ಷೆ ಮಾಡಿದಾಗ ಅದು ಅಸಲಿ ಬಂಗಾರವಾಗಿತ್ತು.

ನಂತರ ಹೆಚ್ಚಿನ ಬಂಗಾರದ ನಾಣ್ಯವನ್ನು ಕೊಡುತ್ತೇವೆ ಎಂದು ಕಾರಿನಲ್ಲಿ ಹೊನ್ನಾಳಿ ಸಮೀಪದ ಹಾಡೋನಹಳ್ಳಿ ಗ್ರಾಮದ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಾಗರಾಜ್ ಜೊತೆ ಮತ್ತೋರ್ವ ಹೆಂಗಸು ಸೇರಿಕೊಂಡು, ಇನ್ನೆರಡು ನಾಣ್ಯವನ್ನು ಪರೀಕ್ಷೆಗೆ ನೀಡಿದ್ದಾರೆ. ಪರೀಕ್ಷೆಗೆ ನೀಡಿದ ಎರಡೂ ನಾಣ್ಯಗಳು ಅಸಲಿಯಾಗಿತ್ತು.


ಉಳಿದ 125 ಗ್ರಾಮ್ ನಾಣ್ಯ ನೀಡುವುದಾಗಿ ತಿಳಿಸಿದ ನಾಗರಾಜ್ ಮತ್ತು ಜೊತೆಯಲ್ಲಿದ್ದ ಮಹಿಳೆ ಹಣ ನೀಡುವಂತೆ ಕೇಳಿದ್ದಾರೆ. ಕಿರಣ್ ಶೇಟ್ ಹಣ ತೆಗೆದು ತನ್ನ ಸ್ನೇಹಿತ ವೀರಾಚಾರ್ಯ ಹತ್ತಿರ ಎಣಿಸಲು ಕೊಡುವ ಸಂದರ್ಭದಲ್ಲಿ ಹಿಂದಿನಿಂದ ಮೂವರು ಅಪರಿಚಿತರು ಏಕಾಏಕಿ ನುಗ್ಗಿ ಕಿರಣ್ ಎ. ಶೇಟ್ ಮತ್ತು ವೀರಾಚಾರ್ಯ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆ ಸಂದರ್ಭದಲ್ಲಿ 1.20 ಲಕ್ಷ ರೂ. ನಗದು, 10 ಗ್ರಾಂ ಮತ್ತು 8 ಗ್ರಾಂ ತೂಕದ ಎರಡು ಚಿನ್ನದ ಸರ ಹಾಗೂ ಒಂದು ಸ್ಯಾಮ್‌ಸಂಗ್ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಕಿರಣ್ ಎ. ಶೇಟ್ ಸಾಗರಕ್ಕೆ ಆಗಮಿಸಿ, ತಮಗಾದ ವಂಚನೆಯ ವಿರುದ್ದ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News