ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ
ಶಿವಮೊಗ್ಗ, ಮಾ.2: ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಘಟನೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಕೈಮರ ಸರ್ಕಲ್‌ನ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಗುರುವಾರ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಲಾರಿ ಪಲ್ಟಿಯಾಗಿ ಸಿಲಿಂಡರ್‌ಗಳು ಅಸ್ತವ್ಯಸ್ತಗೊಂಡರೂ ಅದೃಷ್ಟವಶಾತ್ ಯಾವುದೇ ಸಿಲಿಂಡರ್‌ನಿಂದಲೂ ಗ್ಯಾಸ್ ಲೀಕ್ ಆಗಿಲ್ಲ.
ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಸ್ಥಳೀಯರು ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ಅಣ್ಣಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಾಯ್ತು?: ಶಿವಮೊಗ್ಗ ನಗರದಿಂದ ಚೆನ್ನಗಿರಿಗೆ ಈ ಲಾರಿ ತೆರಳುತ್ತಿತ್ತು. ಕೈಮರ ಸರ್ಕಲ್‌ನ ಸಮೀಪದ ರಸ್ತೆಯ ಹುಬ್ಬುವಿನ ಬಳಿ ಚಾಲಕ ವೇಗವಾಗಿ ಲಾರಿ ಚಲಾಯಿಸಿದ್ದು, ಇದರಿಂದ ಲಾರಿ ಪಲ್ಟಿಯಾಗಿ ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ನುಗ್ಗಿದೆ. ಅಲ್ಲಿಯೇ ನಿಲ್ಲಿಸಲಾಗಿದ್ದ ಟಾಟಾ ಸುಮೋ ಹಾಗೂ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸಂಚಾರ ಅಸ್ತವ್ಯಸ್ತ: ಲಾರಿ ಪಲ್ಟಿಯಾಗಿ ಬಿದ್ದಿದ್ದರಿಂದ ಶಿವಮೊಗ್ಗ-ಚಿತ್ರದುರ್ಗ ನಡುವೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿ ಪರಿಣಮಿಸಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ವಾಹನಗಳು ನಿಂತುಕೊಂಡು ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತಪ್ಪಿದ ದುರಂತ: ಅವಘಡಕ್ಕೀಡಾದ ಲಾರಿಯಲ್ಲಿ ಸುಮಾರು 300ಕ್ಕೂ ಅಧಿಕ ಸಿಲಿಂಡರ್‌ಗಳಿದ್ದವು. ಈ ಎಲ್ಲ ಸಿಲಿಂಡರ್‌ಗಳು ಭರ್ತಿಯಾಗಿದ್ದವು. ಸಿಲಿಂಡರ್‌ಗಳಲ್ಲಿ ಗ್ಯಾಸ್ ಲೀಕ್ ಆಗಿದ್ದರೆ ಭೀಕರ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ.