×
Ad

​ಅಸಲಿ ಬಂಗಾರ ತೋರಿಸಿ ನಕಲಿ ಬಂಗಾರ ನೀಡಿದ ಕಳ್ಳರು

Update: 2017-03-02 23:09 IST

ಸಾಗರ, ಮಾ.2: ಇಲ್ಲಿನ ನಗರ ಠಾಣಾ ವ್ಯಾಪ್ತಿಯಲ್ಲಿ ಅಸಲಿ ಬಂಗಾರ ತೋರಿಸಿ, ಖರೀದಿಗೆ ಬರುವಂತೆ ಹೇಳಿ ನಕಲಿ ಬಂಗಾರ ನೀಡಿ 1.20 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.


ನಗರದ ಅಶೋಕ ರಸ್ತೆಯ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಸಮೀಪ ಚಿನ್ನಬೆಳ್ಳಿ ವ್ಯಾಪಾರ ಮಾಡುವ ಕಿರಣ್ ಎ.ಶೇಟ್ ಎಂಬವರನ್ನು ಶಿವಮೊಗ್ಗದ ನಾಗರಾಜ್ ಎಂಬಾತ ಭೇಟಿ ಮಾಡಿ, ತಮ್ಮ ಹತ್ತಿರ ಪುರಾತನ ಕಾಲದ ಚಿನ್ನದ ನಾಣ್ಯವಿದೆ. ಶಿವಮೊಗ್ಗಕ್ಕೆ ಬಂದರೆ ಅದನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ.

ನಾಗರಾಜ್ ಅವರ ಮಾತನ್ನು ನಂಬಿದ ಕಿರಣ್ ಎ.ಶೇಟ್ ತಮ್ಮ ಸ್ನೇಹಿತ ವೀರಾಚಾರ್ಯ ಜೊತೆಗೆ ಶಿವಮೊಗ್ಗಕ್ಕೆ ಹೋಗಿದ್ದಾರೆ. ಅಲ್ಲಿ ನಾಗರಾಜ್ ಒಂದು ಬಂಗಾರದ ಚಿಕ್ಕ ಬಿಲ್ಲೆಯನ್ನು ನೀಡಿದ್ದು, ಇದನ್ನು ಪರೀಕ್ಷೆ ಮಾಡಿದಾಗ ಅದು ಅಸಲಿ ಬಂಗಾರವಾಗಿತ್ತು.

ಅಲ್ಲದೆ ಬಳಿಕ ಹೆಚ್ಚಿನ ಬಂಗಾರದ ನಾಣ್ಯವನ್ನು ಕೊಡುತ್ತೇವೆ ಎಂದು ಕಾರಿನಲ್ಲಿ ಹೊನ್ನಾಳಿ ಸಮೀಪದ ಹಾಡೋನಹಳ್ಳಿ ಗ್ರಾಮದ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಾಗರಾಜ್ ಜೊತೆ ಮತ್ತೋರ್ವ ಮಹಿಳೆ ಸೇರಿಕೊಂಡು, ಇನ್ನೆರಡು ನಾಣ್ಯವನ್ನು ಪರೀಕ್ಷೆಗೆ ನೀಡಿದ್ದು, ಪರೀಕ್ಷೆಗೆ ನೀಡಿದ ಎರಡೂ ನಾಣ್ಯಗಳು ಅಸಲಿಯಾಗಿತ್ತು.


ಉಳಿದ 125 ಗ್ರಾಂ ನಾಣ್ಯ ನೀಡುವುದಾಗಿ ತಿಳಿಸಿದ ನಾಗರಾಜ್ ಮತ್ತು ಜೊತೆಯಲ್ಲಿದ್ದ ಮಹಿಳೆ ಹಣ ನೀಡುವಂತೆ ಕೇಳಿದ್ದಾರೆ. ಕಿರಣ್ ಶೇಟ್ ಹಣ ತೆಗೆದು ತನ್ನ ಸ್ನೆೀಹಿತ ವೀರಾಚಾರ್ಯ ಹತ್ತಿರ ಎಣಿಸಲು ಕೊಡುವ ಸಂದರ್ಭ ಹಿಂದಿನಿಂದ ಮೂವರು ಅಪರಿಚಿತರು ಏಕಾಏಕಿ ನುಗ್ಗಿ ಕಿರಣ್ ಎ. ಶೇಟ್ ಮತ್ತು ವೀರಾಚಾರ್ಯ ಅವರ ಮೇಲೆ ಹಲ್ಲೆಗೈದು 1.20 ಲಕ್ಷ ರೂ. ನಗದು, 10 ಗ್ರಾಂ ಮತ್ತು 8 ಗ್ರಾಂ ತೂಕದ 2 ಚಿನ್ನದ ಸರ ಹಾಗೂ ಒಂದು ಸ್ಯಾಮ್‌ಸಂಗ್ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.


ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News