×
Ad

ಆಮಿಷವೊಡ್ಡಿ ಕೋಟಿ ರೂ. ವಂಚಿಸಿದ ಆರೋಪ

Update: 2017-03-02 23:11 IST

ಸಾಗರ, ಮಾ.2: ಇಲ್ಲಿನ ಜೋಗ ರಸ್ತೆಯಲ್ಲಿ ಹಿಂದೂಸ್ಥಾನ್ ಎಸ್ಟೇಟ್ಸ್ ಮತ್ತು ಆಗ್ರೋ ಫಾರ್ಮ್ ಇಂಡಿಯಾ ಲಿಮಿಟೆಡ್ ಎಂಬ ಸಂಸ್ಥೆಯ ಕಚೇರಿಯನ್ನು ತೆರೆದು ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ 1.18 ಕೋಟಿ ರೂ. ವಂಚಿಸಿದ ಆರೋಪದ ಮೇರೆಗೆ ಹಾಸನ ಜಿಲ್ಲೆಯ ನಾಲ್ವರನ್ನು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹಾಸನ ತಾಲೂಕು ಹೊಸಮಲ್ಲೇನಹಳ್ಳಿ ಗ್ರಾಮದ ನಟರಾಜ್ ಸಿ.ವಿ., ಚನ್ನರಾಯಪಟ್ಟಣದ ಲೋಕೇಶ್ ಸಿ.ವಿ., ಶ್ರೀಧರ ಬಿ.ಎಸ್., ಚನ್ನಪಟ್ಟಣದ ವೆಂಕಟಾಚಲ ಇವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಇಲ್ಲಿನ ಜೋಗ ರಸ್ತೆಯಲ್ಲಿ ಈ ಹಿಂದೆ ತಮ್ಮ ಸಂಸ್ಥೆಯ ಕಚೇರಿ ತೆರೆದು 69 ಏಜೆಂಟರ ಮೂಲಕ 1,780 ಜನರಿಂದ ರೂ. 1.18 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಸಂಗ್ರಹಿಸಿ ಕಳೆದ ವರ್ಷ ಮಾ. 20ರಂದು ಕಚೇರಿಯ ಬಾಗಿಲು ಮುಚ್ಚಿ ಪರಾರಿಯಾಗಿದ್ದರು. ಈ ಸಂಬಂಧ ನಗರದ ಕೆಳದಿ ರಸ್ತೆಯ ಚಂದ್ರ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಈವರೆಗೆ ತಲೆಮರೆಸಿಕೊಂಡಿದ್ದರು. ಮೈಸೂರಿನಲ್ಲೂ ಇದೇ ರೀತಿಯ ವಂಚನೆ ನಡೆಸಿದ್ದು, ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಪೊಲೀಸರು ಬಾಡಿ ವಾರೆಂಟ್ ಮೂಲಕ ಆರೋಪಿಗಳನ್ನು ಬಂಧಿಸಿ ಬುಧವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News