‘ರಾಜ್ಯ ಮಟ್ಟದ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ’
ಶಿವಮೊಗ್ಗ, ಮಾ.2: ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಮಟ್ಟದಲ್ಲಿ ಅನಿವಾಸಿ ಭಾರತೀಯ ಸಮಿತಿ ರಚಿಸಲಾಗಿದ್ದು, ಇದರ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಿದ್ದು, ಆಯಾ ಜಿಲ್ಲೆಗಳಲ್ಲಿ ಇವರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಅನಿವಾಸಿ ಕನ್ನಡಿಗರು ಮತ್ತು ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ ತೆರೆಯಲಾಗುವುದು. ಅನಿವಾಸಿ ಕನ್ನಡಿಗರ ದತ್ತಾಂಶ ಸಂಗ್ರಹಿಸಿ ಸಂಪರ್ಕ ಕಲ್ಪಿಸುವುದು. ಅನಿವಾಸಿ ಕನ್ನಡಿಗರ ಕಾರ್ಡ್ ವಿತರಿಸುವುದು. ಅಪಘಾತ ಸಂಭವಿಸಿದ್ದಲ್ಲಿ 2 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ ದೊರೆಯುವಂತೆ ವಿಮಾ ಸಂಸ್ಥೆಯೊಡನೆ ಒಪ್ಪಂದ, ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅನಿವಾಸಿ ಕನ್ನಡಿಗರಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಶೇಷ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗುವುದು.
ಈ ಉದ್ದೇಶದಿಂದ ‘ನಮ್ಮ ಊರು ನಮ್ಮ ನಾಡು’ ಎಂಬ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಕನ್ನಡ ಸಂಘಟನೆಯನ್ನು ಪ್ರೋತ್ಸಾಹಿಸಲಾಗುವುದು ಎಂದರು.