×
Ad

​ಕೇಸರಿ ಶಾಲು ಧರಿಸದ ವಿದ್ಯಾರ್ಥಿಯ ಮೇಲೆ ಹಲ್ಲೆ

Update: 2017-03-02 23:15 IST

ಭಟ್ಕಳ, ಮಾ.2: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ಮೂರು ವಾರಗಳಿಂದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದು, ಬುಧವಾರ ಕೇಸರಿ ಶಾಲು ಧರಿಸದೆ ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಕೇಸರಿ ಶಾಲುಧಾರಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಪ್ರಕರಣ ಪೊಲೀಸ್ ಮೆಟ್ಟ್ಟಿಲೇರಿದೆ.


 ಕಾಲೇಜು ವಸ್ತ್ರ ಸಂಹಿತೆಯಲ್ಲಿ ಇಂತಹದ್ದೆ ವಸ್ತ್ರಗಳನ್ನು ಧರಿಸಬೇಕು ಎಂಬ ನಿಯಮ ಇರದ ಕಾರಣ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್, ‘ಅವರವರ ಇಷ್ಟದ ಪ್ರಕಾರ ವಸ್ತ್ರಗಳನ್ನು ಧರಿಸಬಹುದು, ಆದರೆ ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಪ್ರಯತ್ನಪಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದರು.

ಆದರೆ ಬುಧವಾರ ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗಳಿಗೂ ಬಲವಂತವಾಗಿ ಕೇಸರಿ ಶಾಲು ಹಾಕುವಂತೆ ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಕೇಸರಿ ಶಾಲು ಧರಿಸದೆ ಕಾಲೇಜಿಗೆ ಬಂದ ಬಿ.ಎ. ನಾಲ್ಕನೆ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಜಯಂತ್ ನಾಯ್ಕಿ ಎಂಬಾತನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ, ಜೀವನ್, ಸಂದೀಪ್ ಹಾಗೂ ಅಭಿಷೇಕ್ ಎಂಬವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ನಗರಠಾಣೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News