×
Ad

ಶಾಲಾ ಪ್ರವಾಸಿ ಬಸ್ ಪಲ್ಟಿ: 45ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

Update: 2017-03-04 18:43 IST

ವಿರಾಜಪೇಟೆ ಮಾ.4: ವಿರಾಜಪೇಟೆ-ಕಣ್ಣನೂರು ಅಂತಾರಾಜ್ಯ ಹೆದ್ದಾರಿಯ ಪೆರಂಬಾಡಿ ತಿರುವು ರಸ್ತೆಯಲ್ಲಿ ಇಂದು(ಶನಿವಾರ) ಪ್ರವಾಸಿ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ.

ಕೇರಳದ ಇರಿಟಿ ಸಮೀಪದ ಉಳಿಯಿಲ್ ಎಂಬಲ್ಲಿನ ಮಜ್ಲಿಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನ 218 ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಮೂರು ಬಸ್‌ಗಳಲ್ಲಿ ಕೊಡಗಿನ ಪ್ರವಾಸೀ ತಾಣಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ತೆರಳಿದ್ದರು.

ವಿರಾಜಪೇಟೆ ನಗರ ತಲುಪಲು 6ಕಿ.ಮೀ.ಇರುವಾಗಲೇ ಮತ್ತೊಂದು ವಾಹನಕ್ಕೆ ದಾರಿ ಬಿಡುವಾಗ ಬರೀ ವಿದ್ಯಾರ್ಥಿನಿಯರಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.

ಪರಿಣಾಮವಾಗಿ ಬಸ್‌ನಲ್ಲಿ ಇದ್ದ ಒಟ್ಟು 60 ವಿದ್ಯಾರ್ಥಿನಿಯರಲ್ಲಿ 45ಮಂದಿಗೆ ಗಾಯಗಳಾಗಿವೆ.  ಗಾಯಾಳುಗಳನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಚಾಲಕ ಅಬ್ದುಲ್ ಜಲೀಲ್(36)ರನ್ನು ಮಡಿಕೇರಿ ಆಸ್ಪತ್ರೆಗೆ ಹಾಗೂ ಶ್ರೇಯಾನ್(16)ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇರಿಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಉಳಿದಂತೆ  ಫಾತಿಮಾ(13), ಅನುಶ್ರೀ(14), ಅಹಲ್ಯ(14), ಫರ್‌ಹಾನ(15), ಅಫೀದ(15), ಸಾಹಿರಾ ಬಾನು(14), ನಿದಾ(14), ಶಿರಿನ್(14) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವೀರಾಜಪೇಟೆ ಗ್ರಾಮಾಂತರ ಪೋಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News