ಪಡಿತರ ವಿತರಣೆಗೆ ಕೂಪನ್ ಕಡ್ಡಾಯವಲ್ಲ: ಆಹಾರ ಸಚಿವ ಖಾದರ್
ಬೆಂಗಳೂರು, ಮಾ. 4: ಪಡಿತರ ವಿತರಣೆಗೆ ಇನ್ನು ಮುಂದೆ ಕೂಪನ್ ಕಡ್ಡಾಯವಲ್ಲ. ನ್ಯಾಯಬೆಲೆ ಅಂಗಡಿಗಳಲ್ಲೆ ಫಲಾನುಭವಿಗಳು ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಬಹುದಾಗಿದ್ದು, ಎರಡು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಡಿತರ ಪಲಾನುಭವಿಗಳ ಅಲೆದಾಟ ತಪ್ಪಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊಬೈಲ್ ಮೂಲಕ ಕೂಪನ್ ಪಡೆದರೆ, ಬಯೋಮೆಟ್ರಿಕ್ ಇಲ್ಲದೆ ಪಡಿತರ ನೀಡಲಾಗುವುದು ಎಂದರು.
ಕೂಪನ್ ವ್ಯವಸ್ಥೆಯಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೂಪನ್ ಕಡ್ಡಾಯವಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಉಪಕರಣ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಎರಡು ತಿಂಗಳಲ್ಲಿ ಎಲ್ಲ ಅಂಗಡಿಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮೊಬೈಲ್ ಮೂಲಕ ಕೂಪನ್ ಪಡೆದ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಪದಾರ್ಥಗಳನ್ನು ಪಡೆದುಕೊಳ್ಳಬಹುದು ಎಂದ ಅವರು, ಬಯೋಮೆಟ್ರಿಕ್ ಸ್ಕಾನರ್ ಮತ್ತು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಖರೀದಿ ಹೊಣೆಯನ್ನು ನ್ಯಾಯಬೆಲೆ ಅಂಗಡಿಗಳ ಮಾಲಕರಿಗೆ ನೀಡಿದ್ದೇವೆ.
ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಖರೀದಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಮತ್ತು ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದ ಅವರು, ವಿದ್ಯುತ್ ಮತ್ತು ಇಂಟರ್‌ನೆಟ್ ಸಂಪರ್ಕವಿಲ್ಲದ ಪ್ರದೇಶಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಚಿಂತನೆ ನಡೆದಿದೆ ಎಂದರು.
ನಿರಾಕರಿಸಿದರೆ ದಂಡ: ಆಹಾರ ಭದ್ರತೆ ಕಾಯ್ದೆಯನ್ವಯ ಬಿಪಿಎಲ್ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳು ಸಮರ್ಪಕ ಪಡಿತರ ವಿತರಿಸದಿದ್ದರೆ ದಂಡ ಪಾವತಿಸಬೇಕೆಂದು ಎಚ್ಚರಿಸಿದ ಖಾದರ್, ಈ ಸಂಬಂಧ ಲೋಪದೋಷಗಳ ಬಗ್ಗೆ ಇಲಾಖೆಗೆ ಮೊಬೈಲ್ ಮೂಲಕ ದೂರು ನೀಡಬಹುದು. ಕಾರ್ಡುದಾರರು ಪಡಿತರ ಪದಾರ್ಥಗಳಿಗೆ ನ್ಯಾಯಬೆಲೆ ಅಂಗಡಿಗಳಿಂದ ಬಿಲ್ ಪಡೆದುಕೊಳ್ಳಬೇಕು ಎಂದರು.
ವರ್ಗಾವಣೆ ಸರ: ಜಿಲ್ಲೆಯಿಂದ ಜಿಲ್ಲೆಗೂ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ಹಾಗೂ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೂ ಮೊಬೈಲ್ ಮೂಲಕವೇ ಕಾರ್ಡುಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಅಲ್ಲದೆ, ಕಾರ್ಡುಗಳಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ತೆಗೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನಿಯಮ ಸರಳೀಕರಣ ಮಾಡಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತರು, ಬಾಡಿಗೆಗೆ ಕಾರು ಓಡಿಸುವ ಚಾಲಕರು ಸೇರಿದಂತೆ ಬಡವರು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಆ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದರು.
‘ಆಹಾರ ಭದ್ರತೆ ಕಾಯ್ದೆ ಅನುಷ್ಠಾನಕ್ಕೂ ಮೊದಲೇ ‘ಅನ್ನಭಾಗ್ಯ’ ಯೋಜನೆ ಜಾರಿಗೆ ತಂದಿದ್ದು, ಅತ್ಯಂತ ಜನಪ್ರಿಯ-ಯಶಸ್ವಿ ಯೋಜನೆ ಇದು. ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲಿಯೂ ಇಂಥ ಯೋಜನೆ ಇಲ್ಲ. ಹೀಗಿರುವಾಗ ಕೇಂದ್ರದ ಅನುದಾನದ ಯೋಜನೆ ಎಂಬ ಟೀಕೆ ಸಲ್ಲ’
-ಯು.ಟಿ.ಖಾದರ್ ಆಹಾರ ಸಚಿವ