ಮರಳು ಮಾಫಿಯಾ ವಿರುದ್ಧ ಮುಗಿಬಿದ್ದ ಪೊಲೀಸರು
ಶಿವಮೊಗ್ಗ, ಮಾ.4: ಮರಳು ಮಾಫಿಯಾದ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಅಕ್ಷರಶಃ ಸಮರ ಸಾರಿದೆ! ಹೌದು. ಜಿಲ್ಲೆಯಾದ್ಯಂತ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮರಳು ದಂಧೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು, ಅಕ್ರಮವಾಗಿ ಮರಳು ಸಾಗಣೆ ಹಾಗೂ ದಾಸ್ತಾನು ಮಾಡಿಕೊಂಡವರ ಪತ್ತೆಗೆ ಕಠಿಣ ಕ್ರಮ ಕೈಗೊಂಡಿದೆ.
ಈಗಾಗಲೇ ಜಿಲ್ಲೆಯ ವಿವಿಧೆಡೆ ನದಿತೊರೆ, ಹಳ್ಳ-ಕೊಳ್ಳಗಳಿಂದ ಕಾನೂನುಬಾಹಿರವಾಗಿ ಮರಳು ಸಾಗಣೆ ದಂಧೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ವೌಲ್ಯದ ಮರಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ವಾಹನಗಳು ಸೇರಿದಂತೆ ದಂಧೆಯಲ್ಲಿ ತೊಡಗಿದ್ದ ಹಲವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಗಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಈ ಕುರಿತಂತೆ ಸುದ್ದಿ ಬಿಡುಗಡೆ ಮಾಡಿದ್ದಾರೆ. ‘ಸಾರ್ವಜನಿಕರಿಗೆ ಸಿಗಬೇಕಾದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ, ಸರಕಾರಕ್ಕೆ ರಾಜಧನ ವಂಚಿಸಿ ಕಳ್ಳ ಸಾಗಣೆ ಮಾಡು ತ್ತಿರುವ ಕುರಿತಂತೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಡಿಸಿಬಿ ಪೊಲೀಸ್ ತಂಡದ ಮುಖಾಂತರ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ತಂಡವು ಜಿಲ್ಲೆಯಲ್ಲಿ ಅತೀ ಹೆಚ್ಚು ಮರಳು ಲಭ್ಯವಾಗುವ ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಹೊಳೆಹೊನ್ನೂರು, ಭದ್ರಾವತಿ, ಮಂಡಗದ್ದೆ, ಸೊರಬ ಸೇರಿದಂತೆ ಮುಂತಾದೆಡೆಗಳಲ್ಲಿ ಗುಪ್ತವಾಗಿ ಬೀಡುಬಿಟ್ಟಿತ್ತು. ಅಕ್ರಮವಾಗಿ ಮರಳು ತೆಗೆಯುವಿಕೆ, ಸಾಗಣೆ ಹಾಗೂ ದಾಸ್ತಾನು ಮಾಡಿಕೊಂಡಿರು ವವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ದಾಳಿಯ ವಿವರ: ತೀರ್ಥಹಳ್ಳಿ ತಾಲೂಕಿನ ಮಜ್ಜಿಗೆಹೊಳೆಯಲ್ಲಿ ಸುಮಾರು 15 ಲಕ್ಷ ರೂ. ವೌಲ್ಯದ 150 ಲೋಡ್ ಮರಳು ವಶಕ್ಕೆ ಪಡೆಯ ಲಾಗಿದ್ದು, ಆರಗ ಗ್ರಾಮದ ಉಪೇಂದ್ರ ಹಾಗೂ ಇತರರ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದ ತುಂಗಾ ನದಿಯಲ್ಲಿ ಜೆಸಿಬಿ ಮೂಲಕ ಸಂಗ್ರಹಿಸಲಾಗಿದ್ದ 40 ಲಕ್ಷ ರೂ. ವೌಲ್ಯದ ಸುಮಾರು 400 ಲೋಡ್‌ನಷ್ಟು ಮರಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳದಲ್ಲಿ ಎರಡು ಜೆಸಿಬಿ, ನಾಲ್ಕು ಟ್ರಾಕ್ಟರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೀರ್ ಅಹ್ಮದ್, ಪ್ರವೀಣ್, ಮುಡುಬ ರಾಘು ಹಾಗೂ ಇತರ ಆರು ಜನರ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಇತರ ಸರಕಾರಿ ಇಲಾಖೆಯ ಅಧಿಕಾರಿಗಳ ಮೇಲೂ ವಿಚಾರಣೆ ನಡೆಸಲಾ ಗುತ್ತಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ತುಂಗಾ ನದಿಯಿಂದ ಸುಮಾರು 50 ಲೋಡ್‌ನಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ.
ಈ ಸಂಬಂಧ ಗುತ್ತಿಗೆದಾರ ದೊಡ್ಡ ಹನುಮಂತಪ್ಪ ಮತ್ತಿತರರ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಕ್ರಮ: ಅಕ್ರಮ ಮರಳು ಸಾಗಣೆ, ದಾಸ್ತಾನು ಹಾಗೂ ಮರಳು ಮಾಫಿಯಾ ಹತ್ತಿಕ್ಕಲು ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ನಿರಂತರ ಕಾರ್ಯಾಚರಣೆ ನಡೆಸಲಾಗುವುದು. ಇಲ್ಲಿಯವರೆಗೂ ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಸಂಗ್ರಹಣೆ ಹಾಗೂ ದಾಸ್ತಾನು ಮಾಡಿದ್ದ ಸರಿಸುಮಾರು 1 ಕೋಟಿ ರೂ. ವೌಲ್ಯದ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ಮಾಹಿತಿ ನೀಡಿದ್ದಾರೆ.
ಗೂಂಡಾ ಕಾಯ್ದೆ
ನಿರಂತರವಾಗಿ ಅಕ್ರಮ ಮರಳು ತೆಗೆಯುವಿಕೆ, ದಾಸ್ತಾನು ಹಾಗೂ ಸಾಗಣೆ ಮಾಡುವ ಕೃತ್ಯಗಳಲ್ಲಿ ತೊಡಗುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು. ಇಂತಹವರನ್ನು ರೌಡಿ ಪಟ್ಟಿಗೆ ಸೇರ್ಪಡೆ ಮಾಡುವುದರ ಜೊತೆಗೆ ಗೂಂಡಾ ಕಾಯ್ದೆಯಡಿ ಬಂಧನಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಭಿನವ್ ಖರೆ ಎಚ್ಚರಿಕೆ ನೀಡಿದ್ದಾರೆ.
500ಕ್ಕೂ ಅಧಿಕ ಆರೋಪಿಗಳ ಸೆರೆ
ಅಕ್ರಮವಾಗಿ ಮರಳು ತೆಗೆಯುವಿಕೆ, ಸಾಗಣೆ ಹಾಗೂ ದಾಸ್ತಾನು ಮಾಡಿರುವುದಕ್ಕೆ ಸಂಬಂಧಿಸಿದಂತೆ2016 ಹಾಗೂ 2017ರಲ್ಲಿ ಒಟ್ಟಾರೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. 322 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 1,298 ಲೋಡ್ ಮರಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದ್ದು, ಇದರ ವೌಲ್ಯ 1.30 ಕೋಟಿ ರೂ. ಆಗಿದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದ್ದಾರೆ. 2016ರಲ್ಲಿ ಒಟ್ಟಾರೆ 191 ಪ್ರಕರಣ ದಾಖಲಾಗಿವೆ. 437 ಆರೋಪಿಗಳು ಹಾಗೂ 210 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 392 ಲೋಡ್‌ನಷ್ಟು ಮರಳು ವಶಕ್ಕೆ ಪಡೆಯಲಾಗಿದ್ದು, ಇದರ ವೌಲ್ಯ 28.93 ಲಕ್ಷ ರೂ. ಆಗಿದೆ. ಹಾಗೆಯೇ 2017 ರಲ್ಲಿ 28 ಕೇಸ್ ದಾಖಲಾಗಿವೆ. 64 ಆರೋಪಿಗಳನ್ನು ಬಂಧಿಸಲಾಗಿದ್ದು, 112 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 1.1 ಕೋಟಿ ರೂ. ವೌಲ್ಯದ 906 ಲೋಡ್ ಮರಳು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.