ಅಮೆರಿಕಾದಲ್ಲಿ ಭಾರತೀಯರ ಮೇಲಿನ ಹಲ್ಲೆಗೆ ಕೇಂದ್ರದ ಮೌನಕ್ಕೆ ಖರ್ಗೆ ಖಂಡನೆ
ಕಲಬುರ್ಗಿ, ಮಾ.5: ಅಮೆರಿಕಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆಗಳ ಕುರಿತು ಕೇಂದ್ರ ಸರಕಾರ ವೌನ ವಹಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದಲ್ಲಿ ಭಾರತೀಯ ಮೇಲೆ ನಡೆಯುತ್ತಿರುವ ಹಲ್ಲೆಗೆ ಕೇಂದ್ರ ಸರಕಾರ ಗಂಭೀರವಾಗಿ ಪ್ರತಿಕ್ರಿಯಿಸಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದೊಂದಿಗೆ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಮೆರಿಕಾದಲ್ಲಿ ಇಂತಹ ದಾಳಿಗಳು ಹೀಗೆಯೇ ಮುಂದುವರೆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧಕ್ಕೆ ನಾಂದಿಯಾದೀತು. ಇದಕ್ಕೆ ಅವಕಾಶ ಕೊಡದಂತೆ ಅಮೆರಿಕಾ ದಿಟ್ಟ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಭಾರತೀಯ ಮೇಲಿನ ದಾಳಿಗಳನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಜಿಡಿಪಿ ಹೆಚ್ಚಳ ಅಂಕಿ-ಅಂಶಗಳು ಸುಳ್ಳಿನ ಕಂತೆಯಷ್ಟೆ. ಅಭಿವೃದ್ಧಿಯ ಗುರಿಯನ್ನು ಕಡಿಮೆ ಮಾಡಿಕೊಂಡು ಜಿಡಿಪಿ ಹೆಚ್ಚಳವಾಗಿದೆ ಎಂದು ತೋರಿಸುತ್ತಿದ್ದಾರೆ. ಇವೆಲ್ಲವೂ ಚುನಾವಣೆಯ ಸ್ವಾರ್ಥತೆಯಿಂದ ಕೂಡಿದೆ. ಹೀಗಾಗಿ ಜಿಡಿಪಿ ಹೆಚ್ಚಳದ ಅಂಕಿಅಂಶಗಳ್ನು ಜನತೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.