×
Ad

ಪೊಲೀಸ್ ಪೇದೆ ನೇಣಿಗೆ ಶರಣು: ಆತ್ಮಹತ್ಯೆಯ ಸುತ್ತ ಅನುಮಾನದ ಹುತ್ತ...

Update: 2017-03-06 18:19 IST

ಗುಂಡ್ಲುಪೇಟೆ.ಮಾ.6: ತಾಲೂಕಿನ ಬೇಗೂರು ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸಾದ್ (31) ಪೋಲೀಸ್ ವಸತಿಗೃಹದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.     

ಬೇಗೂರು ಪೊಲೀಸ್ ಪೇದೆ ಪ್ರಸಾದ್ ಸೋಮವಾರ ಬೆಳಗ್ಗೆ ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬದವರು ಸಹೋದ್ಯೋಗಿಗಳಿಗೆ ಕರೆಮಾಡಿ ವಿಷಯ ತಿಳಿಸಿದ್ದರು. ಬಳಿಕ ಸಿಬ್ಬಂದಿ ಪ್ರಸಾದ್‌ರ ಕೊಠಡಿಯ ಬಳಿ ಬಂದು ಬಾಗಿಲು ಬಡಿದರೂ ತೆರೆಯದ ಕಾರಣದಿಂದ ಅನುಮಾನಗೊಂಡು ವಸತಿ ಗೃಹದ ಬಾಗಿಲನ್ನು ಒಡೆದು ನೋಡಿದಾಗ ಕೊಠಡಿಯಲ್ಲಿನ ಫ್ಯಾನ್‌ಗೆ ಬೆಡ್ ಶಿಟ್‌ನಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂತು.

ಕೂಡಲೇ ಪೊಲೀಸ್ ಸಿಬ್ಬಂದಿ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೂಲತಃ ತಾಲೂಕಿನ ಕಬ್ಬಹಳ್ಳಿ ಗ್ರಾಮದವರಾದ ಪ್ರಸಾದ್ 2008ರಲ್ಲಿ ಪೋಲೀಸ್ ಇಲಾಖೆಗೆ ಸೇರ್ಪಡೆಯಾಗಿ ಯಳಂದೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ಇತ್ತೀಚೆಗೆ ಬೇಗೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಬೇಗೂರು ಠಾಣೆಯಲ್ಲಿ ವಿಶೇಷ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಒಂದು ಹೆಣ್ಣುಮಗು ಸಹ ಇದೆ.

ರಸ್ತೆಯಲ್ಲಿಯೇ ಅಳುತ್ತಾ ಸಾಗಿದ್ದ ಪ್ರಸಾದ್: 

ರವಿವಾರ ಸಂಜೆವರೆಗೂ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದ ಪ್ರಸಾದ್, ರಾತ್ರಿ ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದ ಎನ್ನಲಾಗಿದೆ. ಬೆಳಗ್ಗೆ 6 ಘಂಟೆ ಸಮಯದಲ್ಲಿ ಪೋಲೀಸ್‌ಠಾಣೆ ಮುಂಭಾಗದಿಂದ ಪೋಲೀಸ್‌ವಸತಿ ಗೃಹದವರೆಗೂ ಅಳುತ್ತಾ ಸಾಗಿದ್ದನ್ನು ಸ್ಥಳಿಯರು ಕಂಡಿದ್ದಾರೆ. ಮೃತ ಪೇದೆ ಅಳುತ್ತಿರುವುದನ್ನು ವಸತಿಗೃಹದಲ್ಲಿದ್ದ ಮತ್ತೊಬ್ಬ ಪೋಲೀಸ್ ಪೇದೆಯ ಪತ್ನಿ ಕಂಡು ಪೋಲೀಸ್ ಸಹೋದ್ಯೋಗಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದು ಕೊಠಡಿಗೆ ತೆರಳುವಷ್ಟರಲ್ಲಿ ಈ ದುರ್ಘಟನೆ ನಡೆದುಹೋಗಿದೆ ಎನ್ನಲಾಗಿದೆ.

ಸಂಬಂಧಿಕರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ:

ಕಬ್ಬಹಳ್ಳಿ ಗ್ರಾಮಸ್ಥರು ಕಬ್ಬಹಳ್ಳಿ ಜಿಪಂ ಸದಸ್ಯ ಕೆ.ಎಸ್.ಮಹೇಶ್ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಪೋಲೀಸ್ ವಸತಿಗೃಹದ ಬಳಿ ಸಮಾವೇಶಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಘಟನೆ ನಡೆದು 4 ಗಂಟೆಗಳಾದರೂ ಸ್ಥಳಕ್ಕೆ ಬಾರದ ಕಾರಣದಿಂದ ಆಕ್ರೋಶಗೊಂಡು ಕೆಲಕಾಲ ಹೆದ್ದಾರಿ ತಡೆ ನಡೆಸಿದರು.

ಪೇದೆಯ ಸಾವಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ತಿಳಿಯುವಂತೆ ಮಾಡಬೇಕು. ಆತನ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಣಾಮವಾಗಿ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿತ್ತು.

ನಂತರ ಪೋಲೀಸ್‌ಠಾಣೆಯ ಆವರಣದಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಲಾಯಿತು. ನಂತರ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ವೃತ್ತನಿರೀಕ್ಷಕ ಕೆ.ವಿ.ಕೃಷ್ಣಪ್ಪ, ಪಿ,ಎಸೈ ಗಳಾದ ಬಿ.ಎನ್. ಸಂದೀಪ್‌ಕುಮಾರ್, ಕಿರಣ್‌ಕುಮಾರ್ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ತಡೆ ತೆರವುಗೊಳಿಸಿದರು.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಜೈನ್, ಡಿವೈಎಸ್ಪಿ ಎಸ್.ಇ. ಗಂಗಾಧರಸ್ವಾಮಿ ಆಗಮಿಸಿ ಸರಕಾರದ ನಿಯಮದಂತೆ ಮೃತರ ಕುಟುಂಬಕ್ಕೆ 20ಲಕ್ಷ ರೂ. ಪರಿಹಾರ ಮತ್ತು ಪತ್ನಿಗೆ ಉದ್ಯೋಗ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದ ನಂತರ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಪೇದೆ ಸಾವಿನ ಸುತ್ತ ಅನುಮಾನದ ಹುತ್ತ!
ಬೇಗೂರು ಪೋಲೀಸ್‌ ಸಿಬ್ಬಂದಿ ಪ್ರಸಾದ್ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಅಥವಾ ಯಾರಾದರೂ ಮಾನಸಿಕವಾಗಿ ಹಿಂಸೆಯಿಂದ ಈ ರೀತಿ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಕಳೆದ ಸೋಮವಾರ ಕಸಾಯಿಖಾನೆಗೆ ಸಾಗಿಸುತ್ತಿದ್ದ 7 ಕರುಗಳನ್ನು ಪ್ರಸಾದ್ ಆಟೋ ಸಮೇತ ವಶಕ್ಕೆಪಡೆದು ಪ್ರಕರಣ ದಾಖಲಾಗಲು ಕಾರಣರಾಗಿದ್ದರು. ಈ ಸಂದರ್ಭದಲ್ಲಿ ಕಸಾಯಿಖಾನೆಗೆ ಜಾನುವಾರು ಸಾಗಾಟದ ದಂಧೆಯಲ್ಲಿ ತೊಡಗಿರುವ ಕೆಲವರು ಪ್ರಸಾದ್‌ಗೆ ದೂರವಾಣಿ ಮೂಲಕ ಧಮ್ಕಿ ಹಾಕಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಜೂಜಾಟದಲ್ಲಿ ತೊಡಗಿದ್ದರವರನ್ನು ಬಂಧಿಸಲು ಹೋಗಿ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧವಾಗಿ ಕೆಲವರಿಂದ ಬೆದರಿಕೆ ಇತ್ತು ಎಂದು ಮಾತನಾಡಿಕೊಳ್ಳುತ್ತಿದ್ದು ನೆರೆದಿದ್ದ ಸಾರ್ವಜನಿಕರಿಂದ ಹಾಗೂ ಕುಟುಂಬದ ಹಲವರಿಂದ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News