×
Ad

ಇನ್ನು ಮೂರೇ ದಿನದಲ್ಲಿ ಟಿಪ್ಪು ಸುಲ್ತಾನ್ ಕಾಲದ ಮದ್ದಿನ ಮನೆ ಸ್ಥಳಾಂತರ !

Update: 2017-03-06 19:22 IST

ಮಂಡ್ಯ, ಮಾ.6: ಬೆಂಗಳೂರು-ಮೈಸೂರು ಜೋಡಿ ರೈಲ್ವೆ ಹಳಿ ಕಾಮಗಾರಿಗೆ ಅಡ್ಡಿಯಾಗಿದ್ದ ಟಿಪ್ಪು ಸುಲ್ತಾನ್ ಕಾಲದ ಮದ್ದಿನ ಮನೆ ಸ್ಥಳಾಂತರ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಮೂರು ದಿನದಲ್ಲಿ ಸ್ಥಳಾಂತರವಾಗಲಿದೆ.

ಐತಿಹಾಸಿಕ ಸ್ಮಾರಕದ ಗುಂಪಿಗೆ ಸೇರಿರುವ ಈ ಮದ್ದಿನ ಮನೆಯನ್ನು ಯಥಾಸ್ಥಿತಿಯಲ್ಲೇ 13.5 ಕೋಟಿ ರೂ. ವೆಚ್ಚದಲ್ಲಿ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಅಮೇರಿಕಾ ಮೂಲದ ಉಲ್ಫೇ ಕಂಪೆನಿ ಸಹಯೋಗದಲ್ಲಿ ಭಾರತದ ಪಿಎಸ್‌ಎಲ್ ಕಂಪೆನಿ ಈ ಯೋಜನೆ ಕೈಗೆತ್ತಿಕೊಂಡಿದೆ.

ಸುಮಾರು 900 ಟನ್‌ನಷ್ಟು ತೂಕದ ಈ ಕಟ್ಟಡವನ್ನು ಭೂಮಿಯಿಂದ ಬೇರ್ಪಡಿಸಲಾಗಿದ್ದು, ಸೋಮವಾರ 30 ಅಡಿಗಳಷ್ಟು ಮುಂದಕ್ಕೆ ಸರಿಸಲಾಗಿದೆ. ಐದು ದಿನಗಳಲ್ಲಿ ಸಂಪೂರ್ಣವಾಗಿ ಕಟ್ಟಡ ಬೇರೆಡೆಗೆ ಸ್ಥಳಾಂತರವಾಗಲಿದೆ ಎಂದು ಪಿಎಸ್‌ಎಲ್ ಕಂಪೆನಿ ನಿರ್ದೇಶಕ ಮುಕುಟ್ ಶರ್ಮಾ ಸುದ್ದಿಗಾರರಿಗೆ ವಿವರಿಸಿದರು.

ಸ್ಥಳ ಪರೀಕ್ಷೆ ನಡೆಸಿದ ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಇಂತಹ ಕಟ್ಟಡ ಸ್ಥಳಾಂತರ ದೇಶದಲ್ಲೇ ಮೊದಲಾಗಿದ್ದು, ರೈಲ್ವೆ ಹಳಿ ನಿರ್ಮಾಣಕ್ಕೆ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗುತ್ತಿದೆ ಎಂದರು.

ಕಟ್ಟಡ ಸ್ಥಳಾಂತರದ ಬೆನ್ನಲ್ಲೇ ಸದರಿ ಜಾಗದ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಸಮರೋಪಾಯದಲ್ಲಿ ಸಾಗಲಿದ್ದು, ಬೆಂಗಳೂರು-ಮೈಸೂರು ಜೋಡಿ ರೈಲ್ವೆ ಮಾರ್ಗ ಕಾಮಗಾರಿ ಸಂಪೂರ್ಣವಾಗಲಿದೆ ಎಂದು ಅವರು ಹೇಳಿದರು.

ಉಲ್ಫೇ ಕಂಪೆನಿ ಪ್ರಾಜೇಕ್ಟ್ ಮ್ಯಾನೇಜರ್ ಝೋಮನ್ ಬಕ್ಕಿಂಗ್ ಹ್ಯಾಮ್, ರೈಲ್ವೇ ಅಧಿಕಾರಿ ರವಿಂಚದ್ರನ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News