ಮಹದಾಯಿ ಹೋರಾಟಕ್ಕೆ 600 ದಿನ: ನರಗುಂದ ಬಂದ್
ಗದಗ, ಮಾ.6: ಮಹದಾಯಿ ನೀರಿಗಾಗಿ ಆಗ್ರಹಿಸಿ ಈ ಭಾಗದ ರೈತರು ನಡೆಸುತ್ತಿರುವ ಹೋರಾಟವು 600 ದಿನಕ್ಕೆ ಕಾಲಿಟ್ಟದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಾತ್ರ ರೈತರ ಹೋರಾಟಕ್ಕೆ ಈವರೆಗೂ ಯಾವುದೇ ಸ್ಪಂದನೆ ನೀಡದೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸರಕಾರಗಳ ನಿರ್ಲಕ್ಷದ ವಿರುದ್ಧ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ರೈತರು, ಅರೆಬೆತ್ತಲೆ ಪ್ರತಿಭಟನೆಗೆ ಇಳಿದಿದ್ದ ಘಟನೆ ನಡೆಯಿತು.
ಬೆಳಗ್ಗೆ 11 ಗಂಟೆ ನಂತರ ಪಟ್ಟಣದ ಉಡಚಮ್ಮ ದೇವಸ್ಥಾನ ಬಳಿ ಜಮಾಯಿಸಿದ ನೂರಾರು ರೈತರು ಬೃಹತ್ ರ್ಯಾಲಿ ನಡೆಸಿದರು. ಉಡಚಮ್ಮನ ದೇವಸ್ಥಾನದಿಂದ ಆರಂಭವಾದ ರ್ಯಾಲಿಯಲ್ಲಿ ನೂರಾರು ರೈತರು ಅರಬೆತ್ತಲೆಯಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ರಾಜ್ಯ, ಕೇಂದ್ರ ಸರಕಾರ ಹಾಗೂ ಗದಗ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎರಡು ಸರಕಾರಗಳು ರೈತರ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಅಸಮಾಧಾನ ಹೊರಹಾಕಿದ ರೈತರು ನೀರು ಬರುವವರೆಗೂ ಹೋರಾಟ ನಿಲ್ಲಲ್ಲ ಎಂಬ ಘೋಷಣೆಗಳ ಮೂಲಕ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರೈತಸೇನಾ ನೇತೃತ್ವದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿ ಹೋರಾಟವು 600ನೆ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ನರಗುಂದ ಪಟ್ಟಣ ಬಂದ್‌ಗೆ ಕರೆ ನೀಡಿತ್ತು.
ಬಂದ್ ಬಹುತೇಕ ಯಶಸ್ವಿಯಾಗಿ ಪಟ್ಟಣ ಸಂಪೂರ್ಣ ಸ್ಥಬ್ಧವಾಗಿತ್ತು. ವಿವಿಧ ಹಳ್ಳಿಗಳಿಂದ 800ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಭಾಗಿಯಾಗಿದ್ದರು. ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಜಮಾಯಿಸಿದ ರೈತರು ವಿಜಯಪುರ-ಹುಬ್ಬಳ್ಳಿ ಹೆದ್ದಾರಿ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.