ದುರಂತ ಅಂತ್ಯ ಕಂಡ ವಿದ್ಯಾರ್ಥಿ ಕಣ್ಮರೆ ಪ್ರಕರಣ
ಶಿವಮೊಗ್ಗ, ಮಾ. 7: ಸಂಪೂರ್ಣ ನಿಗೂಢವಾಗಿ ಪರಿಣಮಿಸಿದ್ದ ಬಾಲಕನ ನಾಪತ್ತೆ ಪ್ರಕರಣ ಬೇಧಿಸುವಲ್ಲಿ ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈ ಪ್ರಕರಣ ದುರಂತದಲ್ಲಿ ಅಂತ್ಯಗೊಂಡಿದೆ. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಬಾಲಕನ ಅಪಹರಿಸಿ ಹತ್ಯೆ ನಡೆಸಿದ ಆರೋಪದ ಮೇರೆಗೆ ಎದುರು ಮನೆಯ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲೂಕು ಚುರ್ಚುಗುಂಡಿ ಗ್ರಾಮದ ನಿವಾಸಿ, ಕೃಷಿ ಕೆಲಸ ಮಾಡುತ್ತಿದ್ದ ಬಸವರಾಜ್ (40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಆಲ್ಕೋಳದ ನಿವಾಸಿ ಪ್ರೇಂಕುಮಾರ್ (8) ಹತ್ಯೆಗೀಡಾದ ಬಾಲಕನಾಗಿದ್ದಾನೆ.
ಘಟನೆಯ ನಂತರ ತನ್ನ ಮೇಲೆ ಯಾರಿಗೂ ಅನುಮಾನ ಬಾರದಂತೆ ಓಡಾಡಿಕೊಂಡಿದ್ದ, ತದನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆಯವರು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಬಾಲಕನ ತಂದೆಯೊಂದಿಗಿದ್ದ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ, ಬಾಲಕನ ಹತ್ಯೆ ನಡೆಸಿದ್ದಾಗಿ ಆರೋಪಿಯು ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಪೊಲೀಸರ ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೆ ಇನ್ನಷ್ಟೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
ಏನಾಗಿತ್ತು?:
ನಗರದ ಅಂಗಡಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ನಿಂಗರಾಜ್ ಎಂಬುವರ ಪುತ್ರ ಪ್ರೇಂಕುಮಾರ್ ಆಲ್ಕೋಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೆ ತರಗತಿ ಅಭ್ಯಾಸ ಮಾಡುತ್ತಿದ್ದ. ಕಳೆದ ಗುರುವಾರ ಎಂದಿನಂತೆ ಬಾಲಕ ಶಾಲೆಯಿಂದ ಮನೆಗೆ ತೆರಳಿದ್ದ.
ಆದರೆ ಶಾಲೆಗೂ ಹೋಗದೆ ಮನೆಗೆ ಹಿಂದಿರುಗದೆ ಬಾಲಕ ಕಣ್ಮರೆಯಾಗಿದ್ದ.
ಪೋಷಕರು ಎಲ್ಲೆಡೆ ಹುಡುಕಾಡಿ ಶುಕ್ರವಾರ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆಯವರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಈ ನಡುವೆ ಬಾಲಕ ನಾಪತ್ತೆಯಾಗಿಲ್ಲ, ಆತನನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಬಾಲಕನ ಪೋಷಕರು ಹಾಗೂ ತಮ್ಮದೆ ಆದ ಮೂಲಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಆಳವಾದ ತನಿಖೆ ನಡೆಸಿದಾಗ ಬಸವರಾಜ್ ಎಂಬಾತ ಇವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ವಿಷಯ ಗೊತ್ತಾಗಿತ್ತು.
ಎದುರು ಮನೆಯವನು!:
ಬಾಲಕನ ತಂದೆ ಲಿಂಗರಾಜ್‌ರವರು ಮೂಲತಃ ಶಿಕಾರಿಪುರದ ಚುರ್ಚುಗುಂಡಿ ಗ್ರಾಮದವರಾಗಿದ್ದಾರೆ. ಅವರ ಎದುರು ಮನೆಯ ನಿವಾಸಿಯೇ ಆರೋಪಿ ಬಸವರಾಜ್ ಆಗಿದ್ದಾನೆ. ಕಳೆದ ಕೆಲ ವರ್ಷಗಳ ಹಿಂದೆ ಲಿಂಗರಾಜ್‌ರವರು ಉದ್ಯೋಗವನ್ನರಿಸಿ ಚುರ್ಚುಗುಂಡಿಯಿಂದ ಶಿವಮೊಗ್ಗದ ಆಲ್ಕೋಳಕ್ಕೆ ಆಗಮಿಸಿ ನೆಲೆಸಿದ್ದರು. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಲಿಂಗರಾಜ್‌ರವರು ಚುರ್ಚುಗುಂಡಿಯಲ್ಲಿ ನೆಲೆಸಿದ್ದ ವೇಳೆ ಬಸವರಾಜ್‌ನು ಭಾಗಿಯಾಗಿದ್ದ ಕಳ್ಳತನ ಕೃತ್ಯವೊಂದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಬಸವರಾಜ್‌ನು ಲಿಂಗರಾಜು ವಿರುದ್ದ ದ್ವೇಷ ತೀರಿಸಿಕೊಳ್ಳಲು ಹೊಂಚು ಹಾಕಿದ್ದ. ತನ್ನಲ್ಲಿರುವ ಸಿಟ್ಟು ಹೊರಹಾಕದೆ ಲಿಂಗರಾಜುವಿನೊಂದಿಗೆ ಅನ್ಯೋನ್ಯವಾಗಿಯೇ ಇದ್ದ. ಆಗಾಗ್ಗೆಯೇ ಆಲ್ಕೋಳದಲ್ಲಿರುವ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಪೊಲೀಸರ ಬಲೆಗೆ:
ಆರೋಪಿಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಬಾಲಕನ ಅಪಹರಣದ ಹಿಂದೆ ಈತನೇ ಇರುವುದನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಯ ವೇಳೆ ಬಾಲಕನನ್ನು ಅಪಹರಿಸಿದ್ದ ದಿನದಂದೆ ಹತ್ಯೆ ನಡೆಸಿದ್ದ ವಿಷಯ ಬಾಯ್ಬಿಟ್ಟಿದ್ದ.
ಅಪಹರಿಸಿದ ದಿನದಂದೇ ಹತ್ಯೆ:
ಗುರುವಾರದಂದು ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ತಾಯಿ ಕರೆಯುತ್ತಿದ್ದಾರೆಂದು ಪುಸಲಾಯಿಸಿ ಬೈಕ್‌ನಲ್ಲಿ ಶಿಕಾರಿಪುರದ ಅಂಜನಾಪುರ ಡ್ಯಾಂ ಸಮೀಪದ ಕುಮದ್ವತಿ ನದಿಯ ಬಳಿ ಕರೆತಂದು ಸಂಜೆ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದ. ನಂತರ ಶವವನ್ನು ಮರಳು ತೆಗೆದಿದ್ದ ಗುಂಡಿಯಲ್ಲಿ ಹೂತಿದ್ದಾಗಿ ಮಾಹಿತಿ ನೀಡಿದ್ದ. ಇದು ತನಿಖೆ ನಡೆಸುತ್ತಿದ್ದ ಪೊಲೀಸರನ್ನೇ ದಿಗ್ಭ್ರಾಂತರನ್ನಾಗಿಸಿತ್ತು.
ಅದರಂತೆ ಮಂಗಳವಾರ ಪೊಲೀಸರು ಬಾಲಕನ ಶವ ಹೂತಿದ್ದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಹೂತ್ತಿದ್ದ ಶವವನ್ನು ಪತ್ತೆ ಹಚ್ಚಿ ಹೊರತೆಗೆದಿದ್ದು, ಶವವು ಭಾಗಶಃ ಕೊಳೆತ ಸ್ಥಿತಿಯಲ್ಲಿದೆ. ಹೆಚ್ಚಿನ ಪರೀಕ್ಷೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ - ಪಿಎಸ್‌ಐ ರಾಘವೇಂದ್ರ ಕಾಂಡಿಕೆಯವರ ಪ್ರಾಮಾಣಿಕ ತನಿಖೆ:
ಸರ್ವೇಸಾಮಾನ್ಯವಾಗಿ ಹೈಪ್ರೊಫೈಲ್ ಕೇಸ್‌ಗಳು, ಭಾರೀ ಒತ್ತಡ ಹಾಕುವವರ ಅಥವಾ ಪತ್ರಿಕೆ-ಟಿ.ವಿ.ಗಳಲ್ಲಿ ಚರ್ಚೆಯಾಗುವ ಪ್ರಕರಣಗಳ ಬಗ್ಗೆ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಆಳವಾದ ತನಿಖೆ ನಡೆಸುತ್ತಾರೆಂಬ ಭಾವನೆ ಜನಮಾನಸದಲ್ಲಿದೆ. ಆದರೆ ಪತ್ರಿಕೆ-ಟಿ.ವಿ.ಗಳಲ್ಲಿ ಸುದ್ದಿಯಾಗದ, ಹೈಪ್ರೊಫೈಲ್ ಪ್ರಕರಣವೂ ಅಲ್ಲದ ಬಡ ಕುಟುಂಬದ ಬಾಲಕನ ನಾಪತ್ತೆ ಪ್ರಕರಣವನ್ನು ದಕ್ಷ ಪೊಲೀಸ್ ಅಧಿಕಾರಿಗಳಾದ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆಯವರು ತಮ್ಮ ದಕ್ಷ-ಪ್ರಾಮಾಣಿಕ ತನಿಖೆಯ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಬಾಲಕನ ಹತ್ಯೆ ನಡೆಸಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿ ಕಾನೂನಿನ ಮುಂದೆ ತಂದು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ.
ಮೊದಲ ಮಗನ ಸಾವು ಅನುಮಾನಾಸ್ಪದ?
ನಿಂಗರಾಜ್ ದಂಪತಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾಳೆ. ಪ್ರಸ್ತುತ ಕೊಲೆಗೀಡಾದ ಪ್ರೇಂಕುಮಾರ್ ಕೊನೆಯವನಾಗಿದ್ದಾನೆ. ನಿಂಗರಾಜ್ ದಂಪತಿ ಶಿಕಾರಿಪುರದ ಚುರ್ಚುಗುಂಡಿಯಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಇವರ ಹಿರಿಯ ಪುತ್ರ ನೀರಿನಲ್ಲಿ ಮುಳುಗಿ ಅಸುನೀಗಿದ್ದ ಎನ್ನಲಾಗಿದೆ. ಈ ಸಾವಿನ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದು, ಪ್ರಸ್ತುತ ಬಾಲಕ ಪ್ರೇಂಕುಮಾರ್ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಬಸವರಾಜ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.