ಪರಸ್ಪರ ತಬ್ಬಿಕೊಂಡು ನೇಣಿಗೆ ಶರಣಾದ ಸೋದರರು !
ಹಾಸನ, ಮಾ.7: ಜೀವನದಲ್ಲಿ ಜಿಗುಪ್ಸೆ ಹೊಂದಿದ ಸೋದರರಿಬ್ಬರೂ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳಿಗ್ಗೆ ತಿಳಿದು ಬಂದಿದೆ.
ಮಂಗಳೂರು ಮೂಲದ ಲೋಕನಾಥ್ (43) ಹಾಗೂ ಪುರುಷೋತ್ತಮ್ (46) ಎಂಬುವರೇ ನಗರದ ಬಿ.ಎಂ. ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ.
ಇಬ್ಬರು ಸಹೋದರರು ಕಳೆದ ನಾಲ್ಕು ದಿನಗಳ ಹಿಂದೆ ವಸತಿಗೃಹವೊಂದರಲ್ಲಿ ರೂಂನ್ನು ಬಾಡಿಗೆಗೆ ಪಡೆದಿದ್ದು, ಮಾರ್ಚ್ 5ರ ವರೆಗೂ ಇಬ್ಬರೂ ತಿರುಗಾಡಿಕೊಂಡು ಇದ್ದರು. ನಂತರದಲ್ಲಿ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ವಸತಿಗೃಹ ಸಿಬ್ಬಂದಿ ಈ ರೂಂನ ಬಳಿ ಹೋಗುವಾಗ ಕೆಟ್ಟ ವಾಸನೆ ಬಂದಿದೆ. ನಂತರ ಅನುಮಾನದಲ್ಲಿ ಬಾಗಿಲ ಬಳಿ ಬಂದಾಗ ವಾಸನೆ ಮತ್ತಷ್ಟು ಹೆಚ್ಚಾಗಿರುವುದು ಕಂಡು ಬಂದಿತು.
ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಅವರು ವಸತಿ ಗೃಹದ ಬಾಗಿಲು ತೆರೆದು ನೋಡಿದಾಗ ಇಬ್ಬರು ಒಬ್ಬರಿಗೊಬ್ಬರೂ ತಬ್ಬಿಕೊಂಡಂತೆ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.
ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿರುವುದಿಲ್ಲ. ಇಬ್ಬರೂ ಸಾಲ ಮಾಡಿ ನಂತರ ವಾಪಸ್ ತೀರಿಸಲಾರದೆ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.