×
Ad

ಸಮಾನತೆಯ ಸಮಾಜಕ್ಕಾಗಿ ಮುನ್ನಡೆಯುವುದೇ ಸ್ತ್ರೀವಾದ: ರಂಜನಾ ಪಾಡಿ

Update: 2017-03-08 13:28 IST

ಕೊಪ್ಪಳ, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಕೊಪ್ಪಳದಲ್ಲಿ ಬುಧವಾರ ಮಹಿಳಾ ಸಮಾವೇಶ ನಡೆಯಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ದಿಲ್ಲಿಯ ಮಹಿಳಾಪರ ಹೋರಾಟಗಾರ್ತಿ ರಂಜನಾ ಪಾಡಿ, ಸ್ತ್ರೀವಾದ ಎಂದರೆ ಕೇವಲ ಮಹಿಳೆಯರಿಗೆ ಸಂಬಂಧಿಸಿದ್ದು ಎಂದು ಹಲವರು ಭಾವಿಸಿದ್ದಾರೆ. ವಾಸ್ತವವಾಗಿ ಸ್ತ್ರೀವಾದ ಎಂಬುವುದು ಹಸಿವಿನ ವಿರುದ್ಧ, ಯುದ್ಧದ ವಿರುದ್ಧ, ಅಸಮಾನತೆಯ ವಿರುದ್ಧ, ಎಲ್ಲಾ ರೀತಿಯ ಶೋಷಣೆಯ ವಿರುದ್ಧ ದನಿಯೆತ್ತುವುದು: ಸಮಾನತೆಯ ಸಮಾಜಕ್ಕಾಗಿ ಮುನ್ನಡೆಯುವುದೇ ಸ್ತ್ರೀವಾದ ಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟಕಿ ವಾಣಿ ಪೆರಿಯೋಡಿ, ನಮ್ಮ ಒಕ್ಕೂಟ ಒಂದು ದಾರ ಇದ್ದ ಹಾಗೆ. ನೂರಾರು ಸಂಘಟನೆ ಮತ್ತು ವ್ಯಕ್ತಿಗಳನ್ನು ಪೋಣಿಸುತ್ತಾ ಬರುತ್ತಿದ್ದೇವೆ. ಕೊನೆಗೆ ಇದೊಂದು ಒಂದು ವಿನ್ಯಾಸವಾಗುತ್ತದೆ. ಈ ಕೆಲಸ ಸುಲಭವಲ್ಲ.ಇದಕ್ಕೆ ಗಟ್ಟಿತನ, ನವಿರುತನ, ಮೃದುತನ ಎಲ್ಲವೂ ಬೇಕು. ಒಂದು ಹೆಚ್ಚು ಕಮ್ಮಿಯಾದರೂ ದಾರ ಕಿತ್ತುಹೋಗುತ್ತದೆ. ನಾವು ಎಲ್ಲವನ್ನು ಮೀರಿ ಒಂದು ಆಶಯದ ಸುತ್ತ ಇರುವ ಸಂಬಂಧ ವನ್ನು ಆಚರಿಸುತ್ತಿದ್ದೇವೆ ಎಂದರು.

ನಾವು ಪ್ರೀತಿ ರಾಜಕಾರಣ ಮಾಡುತ್ತೇವೆ. ನಮಗೆ ಯುದ್ಧ ದ್ವೇಷ ಮತ್ತು ಮನಸ್ತಾಪ ಏನೂ ಬೇಡ. ಜೊತೆಗೆ ನಾವು ಸಂಘರ್ಷ ಸಹ ಮಾಡುತ್ತೇವೆ. ಅದು ಪ್ರೀತಿಯ ಮೂಲಕ ಗೆಲ್ಲವು ಸಂಘರ್ಷದ ಪ್ರಕ್ರಿಯೆ ನಮ್ಮದು. ಇದು ಯಾರಿಗೂ ಕೆಡುಕು ಉಂಟು ಮಾಡಿವುದಿಲ್ಲ.

ಕೊಪ್ಪಳದಲ್ಲಿ ಈ ಸಮಾವೇಶ ಏರ್ಪಡಿಸುವಾಗಿನ ಪ್ರಕ್ರಿಯೆಯಲ್ಲಿ ಇಲ್ಲಿನ ಹೋರಾಟಗಳು, ಸಾಂಸ್ಕೃತಿಕ ಕ್ರಿಯೆ ಮುಂತಾದವುಗಳನ್ನು ಅರ್ಥ ಮಾಡಿಕೊಳ್ಳಲು ಅವಕಾಶವಾಯಿತು ಎಂದರು. ಬಹಳ ಜನ ಈ ಸಮಾವೇಶದಿಂದ ಪ್ರಯೋಜನವೇನು, ಯಾಕೆ ಈ ಸಮಾವೇಶ ಮಾಡುತ್ತೀರಿ ಎಂದು ಪದೇ ಪದೇ ಕೇಳುತ್ತಿದ್ದಾರೆ. ಇದಕ್ಕೆ ಸರಳವಾದ ಉತ್ತರ ‘‘ಈ ಸಮಾವೇಶ ಮಾಡೋದು ಯಾಕೆ’’ ಎಂದು ಕೇಳೋಕೆ ಮಾಡುತ್ತಿದ್ದೇವೆ.

ನಮ್ಮ ದನಿಯನ್ನು ಗಟ್ಟಿ ಮಾಡಿಕೊಳ್ಳಲು, ಅಸಮಾನತೆಯನ್ನು ಪ್ರಶ್ನೆ ಮಾಡಲಿಕ್ಕೆ. ದೌರ್ಜನ್ಯಗಳ ವಿರುದ್ಧ ಹೋರಾಡಲಿಕ್ಕೆ ಈ ಸಮಾವೇಶ ಬೇಕಾಗಿದೆ. ಈ ಸಮಾವೇಶ ಎರಡು ದಿನದ್ದು ಮಾತ್ರವಲ್ಲ. ಇದೊಂದು ಪ್ರಕ್ರಿಯೆ. ಇದೊಂದು ಜೀವಂತ ಅನುಭವಗಳಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News