' ನನ್ನ ಧರ್ಮದಲ್ಲಿ ದೇವರ ಕಲ್ಪನೆ ' ವಿಚಾರ ಸಂಕಿರಣ
ಮಡಿಕೇರಿ ಮಾ.8: ದೇವ ವಿಶ್ವಾಸದಿಂದ ಮನುಷ್ಯನಿಗೆ ವಿಶಾಲ ಮನಸ್ಸು ಉಂಟಾಗುತ್ತದೆ ಮತ್ತು ಮಾನವ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಮಂಗಳೂರಿನ ಎಂ.ಹೆಚ್.ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾವೇರಿ ಹಾಲ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ ಏರ್ಪಡಿಸಿದ್ದ ' ನನ್ನ ಧರ್ಮದಲ್ಲಿ ದೇವರ ಕಲ್ಪನೆ ' ಎಂಬ ವಿಷಯದಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ವಿಷಯ ಮಂಡನೆ ಮಾಡಿದರು.
ದೇವನು ಪ್ರಪಂಚದ ವ್ಯವಸ್ಥೆಗಳನ್ನೆಲ್ಲಾ ಮನುಷ್ಯನಿಗಾಗಿ ಸೃಷ್ಟಿಸಿರುತ್ತಾನೆ. ದೇವನಿಗೆ ವಿಧೇಯನಾಗುವುದು ಮನುಷ್ಯನ ಕರ್ತವ್ಯವಾಗಿದೆ. ದೇವವಿಶ್ವಾಸ ಹೊಂದಿದವನು ಎಲ್ಲ ಬಗೆಯ ಗುಲಾಮಗಿರಿಯಿಂದ ಮುಕ್ತನಾಗುತ್ತಾನೆ. ಅವನಿಗೆ ಜೀವನದ ಬಗೆಗಿನ ಭರವಸೆ ಹೆಚ್ಚಾಗುತ್ತದೆ. ಖಾಸಗೀ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡದವನು ಸಾರ್ವಜನಿಕ ಬದುಕಿನಲ್ಲೂ ಪರಿಶುದ್ಧತೆಯನ್ನು ಕಾಪಾಡುವುದಿಲ್ಲ. ಜೀವನದ ಪಾವಿತ್ರ್ಯತೆಗೆ ಧರ್ಮವಿಶ್ವಾಸ ಅತಿ ಅಗತ್ಯ . ಎಲ್ಲಾ ಧರ್ಮೀಯರೂ ಸಹೋದರರೆಂಬುದು ಜಗತ್ತಿನ ವಾಸ್ತವಿಕತೆಯಾಗಿದೆ ಎಂದರು.
ಇಸ್ಕಾನ್ ಅಧ್ಯಕ್ಷ ಸುಧೀರ್ ಚೈತನ್ಯ ದಾಸ್‌ದೇವವಿಶ್ವಾಸದ ಮೂಲಕ ಜೀವನಕ್ಕೆ ಶಿಷ್ಟಾಚಾರ ಮತ್ತು ಶಿಸ್ತು ಲಭಿಸುತ್ತದೆ. ಅನ್ಯಾಯದಿಂದ ಹಾಗೂ ಅನೀತಿಯಿಂದ ಜೀವನವನ್ನು ಮುಕ್ತಗೊಳಿಸುವುದು ದೇವವಿಶ್ವಾಸದ ಬೇಡಿಕೆಯಾಗಿದೆ. ಮನುಷ್ಯ ಭಗವಂತನ ಅಂಶವಾಗಿದೆ. ದೇವವಿಶ್ವಾಸವು ಆತ್ಮಕ್ಕೂ ಪರಮಾತ್ಮಕ್ಕೂ ಸಂಬಂಧವನ್ನು ಕಲ್ಪಿಸುತ್ತದೆ. ಬಯಕೆ ಮತ್ತು ಬೇಡಿಕೆಗಳ ಮಧ್ಯೆ ವ್ಯತ್ಯಾಸವನ್ನು ತಿಳಿದು ಜ್ಞಾನದ ಮೂಲದಲ್ಲಿ ಬದುಕನ್ನು ಸಾಗಿಸಬೇಕು.ಎಂದು ತಿಳಿ ಹೇಳಿದರು.
ಜಮಾಅತೆ ಇಸ್ಲಮೀ ಹಿಂದ್ ಕರಾವಳಿ ವಲಯ ಸಂಚಾಲಕ ಯು.ಅಬ್ದುಸ್ಸಲಾಂ ಅಧ್ಯಕ್ಷೀಯ ಭಾಷಣ ಮಾಡಿದರು. ದೇವರನ್ನು ನಿರಾಕರಿಸಿದಲ್ಲಿ ಅದರ ಪರಿಣಾಮ ನಮ್ಮ ಮೇಲೆಯೇ ಉಂಟಾಗುತ್ತದೆಎಂದು ಹೇಳಿದರು.
ಪ್ರಾರಂಭದಲ್ಲಿ ಮಸ್ಜಿದುರ್ರಹ್ಮಾ ಖತೀಬ್ ಉಮರ್ ಮೌಲವಿ ಕುರ್‌ಆನ್ ಪಠಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಡಿಕೇರಿ ವರ್ತುಲ ಸಂಚಾಲಕ ಜಿ.ಹೆಚ್.ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಾಸಾದ್, ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾಂನಂದ, ಮದರ್ ಥೆರೆಸಾ ಪ್ರಶಸ್ತಿ ವಿಜೇತರಾದ ಜಯಶ್ರೀ ಅನಂತಶಯನ, ಜಿಲ್ಲಾ ಎ.ಪಿ.ಸಿ.ಆರ್. ಅಧ್ಯಕ್ಷ ಹಾಗೂ ವಕೀಲ ಕೆ.ಎಂ.ಕುಂಞಿ ಅಬ್ದುಲ್ಲ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ.ಅಬ್ದುಲ್ಲ ವಂದಿಸಿದರೆ, ಪಿ.ಕೆ.ಅಬ್ದುಲ್ರ ರೆಹೆಮಾನ್ ಕಾರ್ಯಕ್ರಮ ನಿರೂಪಿಸಿದರು.