ಮಸೀದಿ ನಿರ್ಮಾಣಕ್ಕೆ ವಿರೋಧ: ಎಸ್ಪಿ ಅಣ್ಣಮಲೈ ಸ್ಥಳಕ್ಕೆ ಭೇಟಿ
ಮೂಡಿಗೆರೆ, ಮಾ.8: ಪಪಂ ವ್ಯಾಪ್ತಿಯ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಆರೇಳು ತಿಂಗಳಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಮಸೀದಿ ನಿರ್ಮಾಣದ ಸ್ಥಳಕ್ಕೆ ಎಸ್ಪಿ ಕೆ. ಅಣ್ಣಮಲೈ ಬುಧವಾರ ಭೇಟಿ ನೀಡಿದರು.
ಕುನ್ನಳ್ಳಿ, ಬೀಜವಳ್ಳಿ ಮತ್ತು ಛತ್ರಮೈಧಾನದ ನಿವಾಸಿಗಳಿಗೆ ಅನುಕೂಲಕ್ಕಾಗಿ ಮಸೀದಿ ನಿರ್ಮಿಸಲು ಮುಸಲ್ಮಾನರು ಪಪಂ ವ್ಯಾಪ್ತಿಯ ಛತ್ರ ಮೈಧಾನದಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಮಸೀದಿ ನಿರ್ಮಿಸಲು ಪಪಂ ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ವಿರೋಧಿಸಿರುವ ಸ್ಥಳೀಯ ಹಿಂದೂಪರ ಸಂಘಟನೆ ಕಾರ್ಯಕರ್ತರು, ಮಸೀದಿ ಕಟ್ಟುವ ಸ್ಥಳದ ಅಕ್ಕಪಕ್ಕದಲ್ಲಿ ಪ್ರಾಣಿ ಬಲಿ ಕೊಡುವ ದೇವಸ್ಥಾನಗಳಿವೆ. ಇದರಿಂದ ಅಶಾಂತಿ ಉಂಟಾಗುವ ಸಾದ್ಯತೆಗಳಿವೆ. ಹೀಗಾಗಿ ಮಸೀದಿ ಕಟ್ಟಲು ಅವಕಾಶ ನೀಡಬಾರದು. ಪಟ್ಟಣದಲ್ಲಿ ಈಗಾಗಲೇ ಮೂರು ಮಸೀದಿಗಳಿದ್ದು, ವಿವಾದ ಮೂಡಿಸುವ ಸಲುವಾಗಿ ಹಾಗೂ ಶಾಂತಿಭಂಗ ಮಾಡಲೆಂದು ಕಿರಿದಾದ ಜಾಗದಲ್ಲಿ ಮಸೀದಿ ನಿರ್ಮಿಸಲು ಹೊರಟಿರುವುದು ಸರಿಯಲ್ಲ ಎಂದು ಪಪಂ ಮತ್ತು ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಮಸೀದಿ ಕಟ್ಟಲು ನಿರ್ಧರಿಸಿರುವ ಸ್ಥಳದಿಂದ 30 ಮೀಟರ್ ಹಂತದಲ್ಲಿ ಭೂತಪ್ಪಸ್ವಾಮಿ ದೇವಸ್ಥಾನ, 50 ಮೀಟರ್ ಅಂತರದಲ್ಲಿ ಪಟ್ಟಣದ ಗ್ರಾಮ ದೇವತೆ ಚೌಡೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಪೂಜೆ ಪುರಸ್ಕಾರ ನಡೆಯುತ್ತಿದೆ. ಇಲ್ಲಿ ಕುರಿ, ಕೋಳಿ, ಹಂದಿಗಳನ್ನು ಬಲಿಕೊಡಲಾಗುತ್ತದೆ. ಈ ಎರಡೂ ದೇವಸ್ಥಾನಗಳ ಮದ್ಯದಲ್ಲಿ ಮಸೀದಿ ನಿರ್ಮಿಸಿ ಶಾಂತಿಯುತ ಪ್ರದೇಶವನ್ನು ಅಶಾಂತಿಗೊಳಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಶಾಂತಿಪ್ರಿಯ ನಾಗರೀಕ ವೇದಿಕೆಯ ರಾಮಕೃಷ್ಣ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಡಿ ನೀಡಿದ್ದ ಎಸ್ಪಿ ಕೆ. ಅಣ್ಣಮಲೈ ಮಾತನಾಡಿ, ಆ ಪ್ರದೇಶದ ಅಕ್ಕಪಕ್ಕದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಕುಟುಂಬಗಳಿಂದ ಪ್ರತ್ಯೇಕ ಅರ್ಜಿ ಪಡೆದು, ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಜಯಸಿಂಗ್ ನಾಯಕ್, ಸಿಪಿಐ ಜಗದೀಶ್, ಪಿಎಸ್‌ಐ ರಫೀಕ್, ಸ್ಥಳೀಯ ನಿವಾಸಿಗಳಾದ ರಾಘವೇಂದ್ರ, ಜಯಮ್ಮ, ಪದ್ಮನಾಭ, ಜಾವೀದ್, ಕಾವೇರಮ್ಮ, ರಘುನಾಥ್, ಲಕ್ಷ್ಮಣ್‌ಶೆಟ್ಟಿ, ಆರುದ್ದೀನ್, ಬಾಬು, ಅನಿಲ, ಜಗದೀಶ್, ಬಾಲು, ವಸಂತ ಮತ್ತಿತರರಿದ್ದರು.