ಮೂಡಿಗೆರೆ: ಕಳ್ಳಭಟ್ಟಿ ದಂಧೆಕೋರರ ಸೆರೆ
Update: 2017-03-08 21:53 IST
ಮೂಡಿಗೆರೆ, ಮಾ.8:ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಅಬಕಾರಿ ದಾಳಿಯಲ್ಲಿ ಇಬ್ಬರು ಕಳ್ಳಭಟ್ಟಿ ಸಾರಾಯಿ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸುವ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಅಬಕಾರಿ ಅಧಿಕಾರಿಗಳು ಬಾಳೂರು ಹೊರಟ್ಟಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ 30 ಲೀಟರ್ ಬೆಲ್ಲದ ಕೊಳೆ ಹಾಗೂ ಕಳ್ಳಭಟ್ಟಿ ತಯಾರಿಸಲು ಪರಿಕರ ಹೊಂದಿದ್ದ ಆರೋಪಿ ರಘು (41) ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮಂಗಳವಾರ ಸಂಜೆ ಅಂಗಡಿ ಗ್ರಾಮದಲ್ಲಿ ದಾಳಿ ನಡೆಸಿದ್ದು ಗಿರೀಶ್ (40) ಎಂಬಾತನನ್ನು ಬಂಧಿಸಿದ್ದಾರೆ.
15 ಲೀಟರ್ ಬೆಲ್ಲದ ಕೊಳೆ ದಾಸ್ತಾನು ಹೊಂದಿದ್ದ ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಎಸ್.ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.