" ನೀವು ಹೆದರಿಸಿದರೂ ಸರಿ, ನಾವು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇವೆ "
ಕೊಪ್ಪಳ, ಮಾ.9: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಮ್ಮಿಕೊಂಡ ಸಮಾವೇಶದಲ್ಲಿ ದೆಹಲಿಯ ದಿಟ್ಟ ಹೋರಾಟಗಾರ್ತಿ ಕವಿತಾ ಕೃಷ್ಣನ್‌ರವರ ಭಾಷಣ ಮಾಡಿದರು. ಭಾಷಣದ ಅಂಶಗಳು ಈ ಕೆಳಗಿನಂತಿವೆ:
ನನ್ನ ದಣಿವು ಎಲ್ಲಿ ಹೋಯಿತು ಎಂಬುದೇ ಗೊತ್ತಾಗುತ್ತಿಲ್ಲ:
ಎಲ್ಲಕ್ಕಿಂತ ಮೊದಲು ನನಗೆ ಕನ್ನಡ ಬರುವುದಿಲ್ಲ ಹಾಗಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುವ ಮೂಲಕ ನನ್ನ ಮಾತುಗಳನ್ನು ಆರಂಭಿಸುತ್ತೇನೆ.
ಬಂಧುಗಳೇ ನನ್ನ ಪರಿಚಯ ಮಾಡುವಾಗ ಅನುಪಮರವರು ನಿನ್ನೆ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ದಣಿದು ಬಂದಿದ್ದಾರೆ ಎಂದರು. ಅದು ನಿಜ ಆದರೆ ನಿಮ್ಮೊಂದಿಗೆ ರ್ಯಾಲಿಯಲ್ಲಿ ಹೆಜ್ಜೆ ಹಾಕಿದ ತಕ್ಷಣ ನನ್ನ ದಣಿವು ಎಲ್ಲಿ ಹೋಯಿತು ಎಂಬುದೇ ಗೊತ್ತಾಗುತ್ತಿಲ್ಲ.
ನಿಮ್ಮ ಮೆರವಣಿಗೆಯಲ್ಲಿ ಹಲವು ಘೋಷಣೆಗಳನ್ನು ಕೂಗಿದಿರಿ. ಅದರಲ್ಲಿ ನಿನ್ನೆ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಸಾವನಪ್ಪಿದ ಬಗ್ಗೆ ಘೋಷಣೆ ಕೂಗಿದಿರಿ. ಅದು ಸಾವು ಅಲ್ಲ ಕೊಲೆ ಎಂಬುದು ನನ್ನ ಅಭಿಪ್ರಾಯ.
ದಿನಾ ಬೆಂಗಳೂರನ್ನು ಸ್ವಚ್ಛವಾಗಿಡುವ ನಮಗೆ ನಮ್ಮ ಹಕ್ಕುಗಳನ್ನು ಯಾಕೆ ಕೊಡುವುದಿಲ್ಲ?:
ನಿನ್ನೆ ಬೆಂಗಳೂರಿನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕ ಮಹಿಳೆಯರು ದೊಡ್ಡ ಚಳವಳಿ ನಡೆಸಿದ್ದಾರೆ. ಕನಿಷ್ಟ ವೇತನ ಜಾರಿ ಮಾಡಿ ಮತ್ತು ನಮಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಕೂಗಿದ್ದಾರೆ. ದಿನಾ ಬೆಂಗಳೂರನ್ನು ಸ್ವಚ್ಛವಾಗಿಡುವ ನಮಗೆ ನಮ್ಮ ಹಕ್ಕುಗಳನ್ನು ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಂದು ನೀವು ಕೂಡ ಅವರ ಪರವಾಗಿ ದೊಡ್ಡ ಘೋಷಣೆ ಕೂಗಿದ್ದೀರಿ. ಈ ಹಿಂದೆ ಬೆಂಗಳೂರಿನ ಗಾರ್ಮೆಂಟ್ಸ್ ಮಹಿಳೆಯರು ದೊಡ್ಡ ಹೋರಾಟ ನಡೆಸಿದ್ದರು. ಆದರ ಘೋಷಣೆಗಳನ್ನು ಕೂಗಿದಿರಿ. ಮನ್ನಾರ್ ನಲ್ಲಿ ಟೀ ಎಸ್ಟೇಟ್‌ನಲ್ಲಿ ಕಾರ್ಮಿಕರ ಪರವಾಗಿ ಘೋಷಣೆಗಳನ್ನು ಕೂಗಿದ್ದೀರಿ.
ಬೆತ್ತಲಾಗಿ ಹೋರಾಟಬೇಕಾದ ಪರಿಸ್ಥಿತಿ ಬಂದಿತು:
ನಿಮಗೆಲ್ಲಾ ಗೊತ್ತಿದೆ. ಮಣಿಪುರದಲ್ಲಿ ಸೈನಿಕರ ಸಶಸ್ತ್ರ ಪಡೆಯ ವಿಶೇಷ ಅಧಿಕಾರದ ವಿರುದ್ದ ಬೆತ್ತಲಾಗಿ ಹೋರಾಟಬೇಕಾದ ಪರಿಸ್ಥಿತಿ ಬಂದಿತು. ಅದರ ಕುರಿತು ಕೂಡ ಘೋಷಣೆಗಳು ಕೇಳಿ ಬಂದವು. ಈ ರೀತಿಯ ಎಷ್ಟೋ ಹೋರಾಟದ ಪರವಾದ ಘೋಷಣೆಗಳನ್ನು ಕೂಗಿದಿರಿ. ಅಜಾದಿ ಘೋಷಣೆಗಳು ಕೂಡ ಮೊಳಗಿ ಬಂದವು. ಉಣ್ಣೋದಿಕ್ಕೆ, ಬದುಕೊದಿಕ್ಕೆ, ಶಿಕ್ಷಣ ಪಡೆಯೋದಿಕ್ಕೆ, ಓಡಾಡೋದಿಕ್ಕೆ, ಹಿಂಸೆಯ ವಿರುದ್ದ ನಾವು ಸ್ವಾತಂತ್ರ್ಯ ಕೇಳುತ್ತೇವೆ.
ನಮ್ಮನ್ನು ದೇಶದ್ರೋಹಿಗಳೆಂದು ಕರೆದರೂ ಕಾಶ್ಮಿರದ ನಮ್ಮ ಸಹೋದರಿಯರ ಮೇಲಿನ ಹಿಂಸೆಯನ್ನು ವಿರೋಧಿಸುತ್ತೇವೆ:
ಅಜಾದಿ ಘೋಷಣೆಗಳನ್ನು ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ಮಹಿಳೆಯರು ಕೂಗಿದರು. ಅದೇ ರೀತಿ ನಮ್ಮ ದೇಶದ ಭಾಗವಾಗಿರುವ ಕಾಶ್ಮೀರದ ಹೆಣ್ಣು ಮಕ್ಕಳ ಪರವಾಗಿ ಕೂಡ ನಾವು ಘೋಷಣೆ ಕೂಗುತ್ತೇವೆ. ಅಲ್ಲಿ ಸೈನಿಕರು ನಮ್ಮ ಹೆಸರಿನಲ್ಲಿ ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದೆ. ನಮಗೆ ಗೊತ್ತು ಈ ರೀತಿ ಇವರ ಪರ ದನಿಯೆತ್ತಿದರೆ ನಮ್ಮನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುತ್ತೀರಿ. ಪರವಾಗಿಲ್ಲ ನಮ್ಮನ್ನು ದೇಶದ್ರೋಹಿಗಳೆಂದು ಕರೆದರೂ ಕೂಡ ನಾವು ನಮ್ಮ ಕಾಶ್ಮಿರದ ನಮ್ಮ ಸಹೋದರಿ ಮಹಿಳೆಯರ ಮೇಲಿನ ಹಿಂಸೆಯನ್ನು ವಿರೋಧಿಸುತ್ತೇವೆ.
ಮಹಿಳೆಯರನ್ನು ಏನು ಮಾಡುತ್ತಿದ್ದೀರಿ ಎಂದರೆ ನೀವು ಏನು ಇಲ್ಲ ಅನ್ನುತ್ತೀರಿ. ನೀವು ದಿನ ಪೂರ್ತಿ ಹಲವು ಕೆಲಸಗಳನ್ನು ಮಾಡುತ್ತಿದೀರಿ. ರಾತ್ರಿ 12 ಗಂಟೆಯಲ್ಲಿ ಮಗು ಎದ್ದರೆ ಅದಕ್ಕೆ ಹಾಲುಣಿಸುವ, ಎಲ್ಲಾ ಕೆಲಸಗಳನ್ನು ಮಾಡುತ್ತೀವಿ. ನಾವು ಮಾತ್ರ ಯಾಕೆ ಮಾಡಬೇಕು. ಯಾಕೆ ಗಂಡಸರು ಮಾಡುವುದಿಲ್ಲ ಎಂದು ನಾವು ಪ್ರಶ್ನಿಸಬೇಕು.
ನೀವು ಸರ್ಕಾರಕ್ಕೆ ಒಂದು ಅಂಶ ಗಮನಕ್ಕೆ ತರುತ್ತೀದ್ದೀರಿ. ಅದು ಈ ಸಂದರ್ಭದಲ್ಲಿ ಪಡಿತರ ಕಿತ್ತಿಕೊಳುತ್ತಿದೆ. ಗ್ಯಾಸ್ ಬೆಲೆ ಹೆಚ್ಚು ಮಾಡುತ್ತಿದೆ. ಇದರ ವಿರುದ್ಧ ಹೋರಾಡುವುದು ಕೂಡ. ಮಹಿಳೆಯರ ಪರವಾದ ಹೋರಾಟವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಈ ಎಲ್ಲಾ ಸಹೋದರರು ನಮ್ಮ ಜೊತೆ ಸೇರಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಬೇಕು. ಅದೇ ಸಂದರ್ಭದಲ್ಲಿ ಒಂದು ಅವರಿಗೆ ಅರ್ಥವಾಗಿರಬೇಕು. ಮನೆಯ ಎಲ್ಲಾ ಕೆಲಸಗಳನ್ನು ಅವರು ಕೂಡ ಹಂಚಿಕೊಂಡು ಮಾಡಬೇಕು ಎಂಬುದು.
ಮಹಿಳೆಯರು ಮನೆಯಲ್ಲಿ ಮಹಿಳೆಯರು ಮಾತ್ರ ಕೆಲಸ ಮಾಡುವುದರಿಂದ ಯಾರಿಗೆ ಲಾಭವಾಗುತ್ತಿದೆ? ಗಂಡಸರು ದುಡಿದು ಬಂದಾಗ ಅವರಿಗೆ ವಿಶಾಂತಿ ಪಡೆಯಲು ಬಿಡುತ್ತಿವೆ. ಅಂದರೆ ಅವರಿಗೆ ಮಹಿಳೆಯರು ಸಂತೈಸಿ, ಊಟ ಬಡಿಸಿ, ಮನೆಯ ಕೆಲಸವನ್ನೆಲ್ಲಾ ತಾನೋಬ್ಬಳೇ ಮಾಡಿ ಸಲಹುತ್ತಾಳೆ.
ಇದರಿಂದ ಪುರುಷರಿಗೆ ಮಾತ್ರವಲ್ಲದೇ ನಾಳೆ ಹೋಗಿ ಆತ ದುಡಿಯಲು ಹೋಗುವು ಬಂಡವಾಳಶಾಹಿ ಮಾಲೀಕರಿಗೂ ಲಾಭವಾಗುತ್ತದೆ. ಆದರೆ ಅವರಿಗೆ ಶ್ರಮದ ಮೌಲ್ಯದ ವಿಚಾರಕ್ಕೆ ಬಂದಾಗ ಮಾತ್ರ ಮಹಿಳೆಯರು ಏನು ಮಾಡುವುದಿಲ್ಲ, ಎಲ್ಲಾ ಪುರುಷರೇ ಮಾಡುತ್ತಾರೆ ಎನ್ನುವುದು ಸರಿಯಲ್ಲ. ನಾವು ಇದನ್ನು ಒಪ್ಪುವುದಿಲ್ಲ. ಇನ್ನು ಮುಂದೆ ಎಲ್ಲಾ ಕೆಲಸಗಳಲನ್ನು ಹಂಚಿಕೊಳ್ಳೋಣ
ಮಹಿಳೆ ಮನೆಯ ಕಾಲೊರೆಸುವ ಮ್ಯಾಟ್ ಅಲ್ಲ:
ಬೆಂಗಳೂರಿನಲ್ಲಿ ಹೊಸವರ್ಷದ ದಿನ ಹೆಣ್ಣು ಮಕ್ಕಳು ಬೀದಿಗಿಳಿದರು. ಅವರು ಆ ದಿನವನ್ನು ಸಂಭ್ರಮಿಸಲು ಹೊರಟಿದ್ದರು. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ತಕ್ಷಣ ಎಲ್ಲಾ ಕಡೆಯಿಂದ ಆರೋಪಗಳು ಕೇಳಿ ಬಂದವು. ಅವರು ಅಷ್ಟೊತ್ತಲ್ಲಿ ಅಲ್ಲಿ ಯಾಕೆ ಹೋಗಬೇಕಿತ್ತು. ಇನ್ನೊಂದು ವಿಚಾರ ನೆನಪಾಗುತ್ತಿದೆ. ಹೆಣ್ಣು ಮಕ್ಕಳು ಮನೆಯ ಗಾಡಿ ಇದ್ದ ಹಾಗೆ. ಅದನ್ನು ಮನೆಯಲ್ಲಿ ಪಾರ್ಕ್ ಮಾಡಿದರೆ ಅಪಘಾತ ಆಗುತವುದಿಲ್ಲ. ಹೊರಗೆ ಬಂದಾಗ ಮಾತ್ರ ಅಪಘಾತವಾಗುವುದು ಎಂದು ಕೆಲವರು ಹೇಳುತ್ತಿದ್ದಾರೆ.
ಅಂದರೆ ನಮ್ಮನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಕೂಡಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಾವು ಈ ಸಮಾವೇಶದ ಮೂಲಕ ಉತ್ತರ ಕೊಡುತ್ತೇವೆ. ನಮ್ಮ ಮೆರವಣಿಗೆಯ ಮೂಲಕ ನಾವು ಗಾಡಿಯಲ್ಲ, ಹೊರುವ ದುಡಿಯುವ ಕತ್ತೆಯಲ್ಲ, ಮನೆಯ ಕಾಲೊರೆಸುವ ಮ್ಯಾಟ್ ಅಲ್ಲ. ಬದಲಿಗೆ ನಾವು ಹೆಣ್ಣು ಮಕ್ಕಳು, ಶ್ರಮಜೀವಿಗಳು, ನಮ್ಮ ಇಷ್ಟದ ಬೇಕಾದಷ್ಟು ಹಾಡುತ್ತೇವೆ, ಕುಣಿಯುತ್ತೇವೆ, ನಮ್ಮಿಷ್ಟದ ಹಾಗೆ ನಮ್ಮ ಬದುಕನ್ನು ರೂಪಿಸಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದೇವೆ.
ಮಂತ್ರಿಗಳಿಗೆ ಜೀವಶಾಸ್ತ್ರ ಬೋಧೀಸಬೇಕಿದೆ:
ಒಬ್ಬ ಮಂತ್ರಿ ಹೇಳುತ್ತಾರೆ. ಪುರುಷರ ಮತ್ತು ಮಹಿಳೆಯರ ವಸತಿನಿಲಯದ ಸಮಯಗಳು ಯಾಕೆ ಬೇರೆ ಬೇರೆಯಾಗಿರುತ್ತವೆ ಎಂದರೆ, ಹೆಣ್ಣು ಮಕ್ಕಳ ಹಾರ್ಮೊನ್‌ಗಳು ಕೆಲವು ಸಮಯದಲ್ಲಿ ಸ್ಫೋಟಗೊಳ್ಳುತ್ತವೆ ಎಂದು. ನಾವು ಅವರಿಗೆ ವಿಜ್ಞಾನದ ಜೀವಶಾಸ್ತ್ರ ಬೋಧಿಸಬೇಕಿದೆ. ಹಾರ್ಮೋನ್‌ಗಳು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಇರುವುದಿಲ್ಲ. ಪುರುಷರಿಗೂ ಇರುತ್ತವೆ ಮತ್ತು ಅವೇ ಹೆಚ್ಚಾಗಿ ಸ್ಫೋಟಿಸುತ್ತವೆ ಎಂದು ಅವರಿಗೆ ಹೇಳಿಕೊಡೋಣ. ಜೊತೆಗೆ ಅವರಿಗೆ ಹೇಳಬೇಕು, ನಾವು ಮರೆತಿಲ್ಲ, ನಿಮಗೆ ಮಾತ್ರ 17 ವರ್ಷಕ್ಕೆ ಸಂಜಯ್ ಗಾಂಧಿ ಜೊತೆ ಪ್ರೀತಿಯಾಯಿತು, 18 ವರ್ಷಕ್ಕೆ ಯಾಕೆ ಮದುವೆಯಾದೀರಿ ಎಂಬುದನ್ನು ಅವರಿಗೆ ನಾವು ಕೇಳಬೇಕು. ಅವರಿಗೆ ನಾವು ಗಟ್ಟಿ ಉತ್ತರ ಕೊಡುತ್ತೇವೆ. ನೀವು ಆರೆಸ್ಸೆಸ್ ಸೇರಿ ನಮ್ಮ ಮೇಲೆ ಮನುವಾದ ಹೇರಲು ಬಂದರೆ ಒಪ್ಪುವುದಿಲ್ಲ ಎಂದು.
ನಾವು ಕಾರ್ಮಿಕರನ್ನು ಸಂಘಟಿಸುತ್ತೇವೆ. ತಮಿಳುನಾಡಿನ ಗಾರ್ಮೆಂಟ್ಸ್ ಕಾರ್ಮಿಕರನ್ನು ಕೆಲಸದ ಅವಧಿಯಲ್ಲಿ ಅವರನ್ನು ಮುಚ್ಚಿಡಲಾಗುತ್ತಿದೆ. ಅವರಿಗೆ ಯಾವುದೇ ಹಕ್ಕುಗಳಿರುವುದಿಲ್ಲ. ಅವರು ಫೋನ್ ಬಳಸುವಂತಿಲ್ಲ, ಯಾರೊಡನೆಯೂ ಮಾತಾಡುವಂತಿಲ್ಲ ಇತ್ಯಾದಿ ಕಟ್ಟಳೆಗಳಿವೆ. ನಾನು ಯಾವುದೋ ಕಾಲದ ಕಾಪ್ ಪಂಚಾಯತ್ ಬಗ್ಗೆ ಹೇಳುತ್ತಿಲ್ಲ. ಬದಲಿಗೆ ಆಧುನಿಕ ಯುಗದಲ್ಲಿ ಬ್ರಾಂಡ್ ಕಂಪನಿಯ ಬಟ್ಟೆಗಳನ್ನು ತಯಾರು ಮಾಡುವ ಮಹಿಳಾ ಕಾರ್ಮಿಕರ ನೋವಿನ ಕಥೆ ಹೇಳುತ್ತಿದ್ದೇನೆ.
ಆ ಕಂಪನಿಯವರನ್ನು ಯಾಕೆ ಈಗೆ ಮಹಿಳೆಯರನ್ನು ಇಟ್ಟೀದ್ದೀರಿ ಎಂದು ಕೇಳಿದರೆ, ಈ ಮಹಿಳಾ ಕಾರ್ಮಿಕರ ತಂದೆ ತಾಯಿಗಳು ಮೊಬೈಲ್ ಬಳಸಲು ಒಪುವುದಿಲ್ಲ ಅದಕ್ಕೆ ಎಂದು. ನಾವು ಹೇಳುತ್ತೇವೆ ನೀವು ಯಾಕೆ ಅವರ ಅವರ ಅಪ್ಪ ಅಮ್ಮಂದಿರು ಆಗಿ ವರ್ತಿಸುತ್ತೀರಿ? ನೀವು ಕೇವಲ ಕಂಪನಿಯ ಮಾಲೀಕರಾಗಿ ಉತ್ತರಿಸಿ. ಇದಕ್ಕೆ ನಿಜ ಕಾರಣವೆಂದರೆ ಈ ಕಾರ್ಮಿಕ ಮಹಿಳೆಯರು ಕಾರ್ಮಿಕರ ಯೂನಿಯನ್ ಕಟ್ಟಬಾರದು, ಹಕ್ಕುಗಳಿಗಾಗಿ ದನಿಯೆತ್ತಬಾರದು ಅಂತ ನೀವು ಈ ಕಟ್ಟಳೆಗಳನ್ನು ಹೇರಿದ್ದೀರಿ.
ನಿಮ್ಮ ತಾಯಿಯ ಜೊತೆ ಮಾತನಾಡಲು ನನಗೆ ಅವಕಾಶ ಕೊಡು. ಆಗ ಅವಳು ಅವಳ ನೋವುಗಳನ್ನು ಹೇಳಬಹುದು:
ಇವತ್ತು ನನಗೆ ಟ್ವೀಟ್ಟರ್‌ನಲಿ ಒಬ್ಬ ಈಗೆ ಪ್ರಶ್ನಿಸಿದ. ನನ್ನ ತಾಯಿ ಖುಷಿಯಾಗಿದ್ದಾಳೆ. ನೀವು ಮಾತ್ರ ಯಾಕೆ ಹೀಗೆ ಮಹಿಳಾ ಸಮಾನತೆ ಎಂತ ಬೊಬ್ಬೆ ಹೊಡೆಯುತ್ತಿದ್ದೀರಿ ಅಂತ? ಅದಕ್ಕೆ ಅವನಿಗೆ ನಾನು ಕೇಳುತ್ತೇನೆ, ನಿಮ್ಮ ತಾಯಿಯ ಜೊತೆ ಮಾತನಾಡಲು ನನಗೆ ಅವಕಾಶ ಕೊಡು. ಆಗ ಅವಳು ಅವಳ ನೋವುಗಳನ್ನು ಹೇಳಬಹುದು. ಅವಳ ಒಳಗೇನಿಗೆ ಎಂದು ನಮಗೆ ಗೊತ್ತಾಗುತ್ತದೆ ಎಂದು ಉತ್ತರಿಸಿದ್ದೇನೆ.
ನೀವು ಹೆದರಿಸಿದರೆ ನಾವು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇವೆ:
ಈ ರೀತಿಯ ಮನುವಾದಿ ಮನಸ್ಥಿತಿಯ ಹುಡುಗರು ನೀವು ಹಿಂದೂ ಮುಸ್ಲಿಂ ಹುಡುಗ ಹುಡುಗಿ ಜೊತೆಗೆ ಸ್ನೇಹ, ಪ್ರೀತಿ ಮಾಡಿದರೆ ಲವ್ ಜಿಹಾದ್ ಹೆಸರಿನಲ್ಲಿ ಗಲಭೆ ಹುಟ್ಟಿಸುತ್ತಿದ್ದೀರಿ. ನೀವು ನಮ್ ಪ್ರೀತಿಗೆ ಹೆದರುತ್ತೀರಿ. ಒಂದು ವೇಳೆ ನೀವು ಹೆದರಿಸಿದರೆ ನಾವು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇವೆ. ನಿಮ್ಮ ಬೆದರಿಕೆಗಳಿಗೆ ಮಾತ್ರ ಹೆದರುವುದಿಲ್ಲ. ಜಿಹಾದ್ ಎಂದರೆ ಸಂಘರ್ಷ ಅಂತ. ನಾವು ಪ್ರೀತಿಯ ಸಂಘರ್ಷ ನಡೆಸುತ್ತೇವೆ.
ನಮ್ಮ ದೇಹ ನಮ್ಮ ಹಕ್ಕು. ನೀವು ನಮ್ಮ ಸುರಕ್ಷತೆಯ ಹೆಸರಿನಲ್ಲಿ ಎಲ್ಲೆಡ ಗದ್ದಲ, ದಂಗೆ ಮೂಡಿಸುತ್ತೀರಿ. ಈ ಶಕ್ತಿಗಳನ್ನಿ ನಾವು ವಿರೋಧಿಸುತ್ತೇವೆ. 100 ವರ್ಷಕ್ಕಿಂತ ಹಿಂದೆ ಪ್ರಪಂಚದ ಹಲವುದ ದೇಶಗಳಲ್ಲಿ ಕಾರ್ಮಿಕರು ಹೋರಾಟಕ್ಕೀಳಿದರು, ನಮಗೆ ಕೇವಲ 8 ಗಂಟೆಯ ಕೆಲಸವಿರಬೇಕು, ನಮಗೂ ಹಕ್ಕುಗಳು ದಕ್ಕಬೇಕು ಎಂದು. ಅಲ್ಲಿಂದ ಅನೇಕ ಘೋಷಣೆಗಳು ನಮಗೆ ಸಿಕ್ಕಿವೆ.
ಈತ ಹೇಳುತ್ತಾನೆ ನನ್ನ ಹತ್ತಿರ ಬೇಕಾದಷ್ಟು ದುಡ್ಡಿದೆ, ಬೇಕಾದ ಹೆಣ್ಣು ಮಕ್ಕಳನ್ನು ಮುಟ್ಟುತ್ತೇನೆ:
ನಿನ್ನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ 40 ದೇಶಗಳಲ್ಲಿ ಏಕಕಾಲದಲ್ಲಿ ಮಹಿಳೆಯರು ಮುಷ್ಕರ ಘೋಷಿಸಿದರು. ಹೆಣ್ಣು ಮಕ್ಕಳು ಮಾಡುವ ಹತ್ತಾರು ಕೆಲಸಗಳಲ್ಲಿ ಯಾವುದಾದರೂ ಒಂದು ಕೆಲಸ ನಿಲ್ಲಿಸಿ ಮುಷ್ಕರ ಮಾಡಿದ್ದಾರೆ. ಪ್ಯಾಲೆಸ್ತೇನ್ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದಾರೆ. ಅಮೆರಿಕದಲ್ಲಿ ಟ್ರಂಪ್ ವಿರುದ್ದ ಸಾವಿರಾರು ಮಹಿಳೆಯರು ನಿನ್ನೆ ಮುಷ್ಕರ ಹೂಡಿದ್ದಾರೆ. ಈತ ಹೇಳುತ್ತಾನೆ ನನ್ನ ಹತ್ತಿರ ಬೇಕಾದಷ್ಟು ದುಡ್ಡಿದೆ ಬೇಕಾದ ಹೆಣ್ಣು ಮಕ್ಕಳನ್ನು ಮುಟ್ಟುತ್ತೇನೆ ಎಂದು. ಅವನ ವಿರುದ್ದ ಮುಷ್ಕರ ನಡೆದಿದೆ.
100 ವರ್ಷದ ಹಿಂದೆ ದುಡಿವ ಕಾರ್ಮಿಕರ ಪರವಾಗಿ ಮಹಿಳೆಯರು 8 ಗಂಟೆಗಳ ಕೆಲಸ, 8 ಗಂಟೆಗಳ ವಿಶ್ರಾಂತಿ, 8 ಗಂಟೆಗಳ ವಿರಾಮ, ಕೆಲಸದ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು. ಅವರು ತೋರಿಸಿಕೊಟ್ಟಂತೆ ನಮ್ಮ ವಿಮೋಚನೆ ಎಂದರೆ ಪರಿಪೂರ್ಣ ವಿಮೋಚನೆ. ಅಂದರೆ ಸಾಮ್ರಾಜ್ಯವಾದದಿಂದ, ಮನುವಾದದಿಂದ, ಬಂಡವಾಳಶಾಹಿಯಿಂದ, ಪುರುಷಾಧಿಪತ್ಯದಿಂದ ವಿಮೋಚನೆ ಎಂದು ಸಾರಿಹೇಳಬೇಕಿದೆ. ಅದಕ್ಕೆ ಇಂದಿನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದ ಮುನ್ನುಡಿಯಾಗಿದೆ.
ಸಾವಿತ್ರಿಫುಲೆರವರ ಮತ್ತು ಬಾಬಾ ಸಾಹೇಬರ ಆಶಯಗಳನ್ನು ಖಂಡಿತವಾಗಿ ಈಡೇರಿಸುತ್ತೇವೆ ಎಂದು ಭರವಸೆ ಕೊಡುತ್ತಾ ಆಂದೋಲನವನ್ನು ಮುಂದುವರೆಸೋಣ.
ಕವಿತಾ ಕೃಷ್ಣನ್ ಪರಿಚಯ:
- ಆಲ್ ಇಂಡಿಯಾ ಪ್ರೊಗ್ರೆಸ್ಸಿವ್ ವುಮೆನ್ಸ್ ಅಸೋಷಿಯೇಷನ್ಸ್ ನ ಜನರಲ್ ಸೆಕ್ರಟರಿ.
- ಜೆ.ಎನ್.ಯು ನಲ್ಲಿ ಸಾಕಷ್ಟು ಚಟುವಟಿಕೆಗಳನ್ನು ನಡೆಸಿದ್ದಾರೆ. ಮೂಲತಃ ತಮಿಳುನಾಡಿನ ಕೂಳೂರುನವರು. ದೆಹಲಿಯ ಜೆಎನ್‌ಯು ನಲ್ಲಿ ವಿದ್ಯಾಬ್ಯಾಸ ಮಾಡಿ ಜೆಎನ್‌ಯು ಸಂಘದ ಜಾಯಿಂಟ್ ಸೆಕ್ರಟರಿ ಕೂಡ ಆಗಿದ್ದರು.
- ಯುವ ಹೋರಾಟಗಾರ ಚಂದ್ರಶೇಖರ್ ಕೊಲೆ ವಿರೋಧಿಸಿ ದಿಟ್ಟ ಹೋರಾಟ ಮಾಡಿ ಜೈಲು ಸೇರಿದ್ದರು.
- ಸಿಪಿಐ ಎಂಎಲ್ ಲಿಬರೇಷನ್‌ನ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದಾರೆ.
- 2012ರಲ್ಲಿ ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಧೀರ್ಘ ಹೋರಾಟದ ಮೂಲಕ ಮತ್ತು ಸೋಷಿಯಲ್ ಮೀಡಿಯಾದ ಮೂಲಕವೂ ಚಿರಪರಿಚಿತರಾದರು.