ವಾಣಿಜ್ಯ ತೆರಿಗೆ ಚಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ: ವಾಣಿಜ್ಯ ತೆರಿಗೆ ಅಧಿಕಾರಿ ಸಹಿತ ಐವರ ವಶ; 47 ಸಾವಿರ ನಗದು ಜಪ್ತಿ
ಗುಂಡ್ಲುಪೇಟೆ, ಮಾ.9: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬೆಳ್ಳಂಬೆಳಗ್ಗೆ ಪಟ್ಟಣದ ವಾಣಿಜ್ಯತೆರಿಗೆ ಕಚೇರಿಗೆ ದಾಳಿ ನಡೆಸಿ ಪರಿಶೀಲಿಸಿ ಹೆಚ್ಚುವರಿಯಾಗಿ ಸಂಗ್ರಹಿಸಿದ್ದ 41 ಸಾವಿರ ರೂಪಾಯಿಗಳನ್ನು ಪತ್ತೆಹಚ್ಚಿ ವಾಣಿಜ್ಯ ತೆರಿಗೆ ಅಧಿಕಾರಿ ಸೇರಿದಂತೆ ಐವರನ್ನು ಬಸ್ತಗಿರಿ ಮಾಡಿದರು.
ಬೆಳಗ್ಗೆ 7 ಗಂಟೆಯ ವೇಳೆಗೆ ಚಾಮರಾಜನಗರದ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ಪ್ರಭಾಕರ್‌ರಾವ್ ಸಿಂಧೆ ನೇತೃತ್ವದಲ್ಲಿ ವಾಣಿಜ್ಯ ತೆರಿಗೆ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲಾತಿಗಳು ಹಾಗೂ ಸಂಗ್ರಹವಾಗಿದ್ದ ಹಣವನ್ನು ಪರಿಶೀಲಿಸಿದ್ದಾರೆ. ಕಚೇರಿಯ ಡ್ರಾನಲ್ಲಿಟ್ಟಿದ್ದ ಹೆಚ್ಚುವರಿಯಾಗಿ 47 ಸಾವಿರದ 415 ನೂರು ರೂಪಾಯಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹೊರರಾಜ್ಯಗಳಿಗೆ ಸಂಚಾರ ಮಾಡುವ ವಾಹನಗಳ ಚಾಲಕರಿಂದ ನಿಗದಿಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಪೊಲೀಸರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವಾಣಿಜ್ಯತೆರಿಗೆ ಅಧಿಕಾರಿ ಸಿ.ಪಿ.ಯೋಗೇಶ್, ವಾಣಿಜ್ಯತೆರಿಗೆ ಇನ್ಸ್‌ಪೆಕ್ಟರ್ ರತ್ನರಾಜಪ್ಪ, ಗುಮಾಸ್ಥ ಶಿವಕುಮಾರ್, 4 ನೇದರ್ಜೆ ನೌಕರ ಮಹದೇವ ಹಾಗೂ ಭದ್ರತಾ ಸಿಬ್ಬಂದಿ ಅಶೋಕ ಎಂಬುವರನ್ನು ಬಂಧಿಸಿದ್ದು ಚಾಮರಾಜನಗರದ ಜಿಲ್ಲಾ ಸತ್ರನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ದರು.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸಿಬ್ಬಂದಿ ಕುಮಾರ್‌ಆರಾಧ್ಯ, ಮಹದೇವಸ್ವಾಮಿ, ಗುರು ಮಲ್ಲಿಕಾರ್ಜುನಪ್ಪ, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.