×
Ad

ಸ್ವದೇಶಿ ನಿರ್ಮಿತ ತಿಲ್ಲಾಂಚಾಂಗ್ ನೌಕಾಪಡೆಗೆ ಸೇರ್ಪಡೆ

Update: 2017-03-09 23:05 IST

ಕರಾವಳಿ ತೀರ, ಸಮುದ್ರ ಗಸ್ತುಕಾರ್ಯಕ್ಕೆ ನಿಯೋಜನೆ
ಕರಾವಳಿ, ಸಮುದ್ರ ಕಣ್ಗಾವಲು, ವಿಪತ್ತು ಸಂದರ್ಭದಲ್ಲಿ ಬಳಕೆ

ಕಾರವಾರ, ಮಾ.9: ಕ್ಷಿಪ್ರ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ತಿಲ್ಲಾಂಚಾಂಗ್ ಯುದ್ಧ ನೌಕೆಯನ್ನು ಪಶ್ಚಿಮ ನೌಕಾದಳದ ಫ್ಲಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್ ಲೂತ್ರಾ ಅವರು ಕಾರವಾರದ ಐಎನ್‌ಎಸ್ ನೌಕಾನೆಲೆಯಲ್ಲಿ ಗುರುವಾರ ಭಾರತೀಯ ನೌಕಾಪಡೆಗೆ ಲೋಕಾರ್ಪಣೆ ಮಾಡಿದರು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ವಾಟರ್ ಜೆಟ್ ತಂತ್ರಜ್ಞಾನ ಹೊಂದಿರುವ ತಿಲ್ಲಾಂಚಾಂಗ್ ಯುದ್ಧನೌಕೆಯನ್ನು ಕರ್ನಾಟಕ ಕರಾವಳಿ ತೀರ ಪ್ರದೇಶ ಹಾಗೂ ಸಮುದ್ರ ಭಾಗದಲ್ಲಿ ಗಸ್ತು ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದರು.


ಇದು ಕಾರವಾರ ನೌಕಾನೆಲೆಯಲ್ಲಿ ಕೇಂದ್ರಸ್ಥಾನವನ್ನು ಹೊಂದಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿರುತ್ತದೆ. ಈ ಯುದ್ಧನೌಕೆಯಲ್ಲಿ ನೌಕಾಪಡೆಯ ಅಧಿಕಾರಿಗಳು ಸೇರಿದಂತೆ 50 ಮಂದಿ ನೌಕಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ತಿಲ್ಲಾಂಚಾಂಗ್ ಕನಿಷ್ಠ ನೀರಿನಲ್ಲಿಯೂ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದರು.


ಜಿಆರ್‌ಎಸ್‌ಸಿ ಕೋಲ್ಕತ್ತಾ ಸಂಸ್ಥೆ ಈ ಯುದ್ಧನೌಕೆಯನ್ನು ಸಿದ್ಧಪಡಿಸಿದ್ದು, ಈ ಸರಣಿಯಲ್ಲಿ 4 ಯುದ್ಧ ನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 2 ನೌಕೆಗಳು ವಿಶಾಖಪಟ್ಟಣದಲ್ಲಿ ಕಾರ್ಯಾಚರಿಸುತ್ತಿವೆ ಎಂದ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್, ಪಶ್ಚಿಮ ಕರಾವಳಿಗೆ ನೀಡಿರುವ ಪ್ರಥಮ ಯುದ್ಧನೌಕೆ ಇದಾಗಿದೆ ಎಂದರು.


 ತಿಲ್ಲಾಂಚಾಂಗ್‌ಯುದ್ಧನೌಕೆಯಲ್ಲಿ ಪ್ರೊಪೆಲ್ಲರ್ ತಂತ್ರಜ್ಞಾನದ ಬದಲಾಗಿ ಮೂರು ಬಲಿಷ್ಠ ವಾಟರ್ ಜೆಟ್ ಇಂಜಿನ್‌ಗಳನ್ನು ಅಳವಡಿಸಲಾಗಿದೆ. ಈ ವಾಟರ್ ಜೆಟ್‌ಗಳು ನೀರನ್ನು ಸೆಳೆದುಕೊಂಡು ನೌಕೆಯನ್ನು ವೇಗವಾಗಿ ಮುನ್ನಡೆಸಿಕೊಂಡು ಹೋಗುತ್ತದೆ ಎಂದು ಮಾಹಿತಿ ನೀಡಿದರು.
ಕಮಾಂಡರ್ ಅದಿತಿ ಪಟ್ನಾಯಕ್ ಐಎನ್‌ಎಸ್ ತಿಲ್ಲಾಂಚಾಂಗ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಲಿದ್ದು, ಕರಾವಳಿ ಮತ್ತು ಸಮುದ್ರದಲ್ಲಿ ಕಣ್ಗಾವಲು, ನುಸುಳುಕೋರರು ಅಥವಾ ಕಳ್ಳಸಾಗಣೆದಾರರ ಮೇಲೆ ನಿಗಾ ಮತ್ತು ತಡೆ, ಇಇಝಡ್ ನಿಯಂತ್ರಣ, ಕಾನೂನು ಪರಿಪಾಲನೆ ಮಾತ್ರವಲ್ಲದೆ ಮಿಲಿಟರಿಯೇತರ ಕಾರ್ಯಗಳಾದ ರಕ್ಷಣಾ ಕಾರ್ಯಾಚರಣೆ, ಮಾನವೀಯ ನೆರವುಗಳು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ಯುದ್ಧನೌಕೆ ಸನ್ನದ್ಧವಾಗಿರುತ್ತದೆ ಎಂದು ಕರ್ನಾಟಕ ನೌಕಾ ವಲಯದ ರಿಯರ್ ಅಡ್ಮಿರಲ್ ಕೆ. ಜೆ. ಕುಮಾರ್ ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಜಿಆರ್‌ಎಸ್‌ಇ ಸಂಸ್ಥೆಯ ಚೇರ್‌ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಕೆ. ಸಕ್ಸೇನಾ, ನೌಕಾನೆಲೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News