×
Ad

​ತಹಶೀಲ್ದಾರ್ ದಾಖಲಾತಿಗಳನ್ನು ಹಿರೇಮಠ ಕೈಗೊಪ್ಪಿಸಿದ್ದಾರೆ: ಮೋಟಮ್ಮ ಆರೋಪ

Update: 2017-03-09 23:07 IST

ಮೂಡಿಗೆರೆ, ಮಾ.9: ಜಮೀನು ಒತ್ತುವರಿ ತೆರವಿಗೆ ನೋಟಿಸ್ ನೀಡಿದ್ದಕ್ಕೆ ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ತಹಶೀಲ್ದಾರ್ ಡಿ.ನಾಗೇಶ್ ನನ್ನ ವಿರುದ್ಧ ಆಪಾದನೆ ಮಾಡಿದ್ದು, ವಾರ್ಗಾವಣೆಯ ಹಿನ್ನೆಲೆಯಲ್ಲಿ ಸರಕಾರಿ ದಾಖಲೆಗಳನ್ನು ಎಸ್.ಆರ್. ಹಿರೇಮಠ ಅವರಿಗೆ ನೀಡಿದ್ದಾರೆ ಎಂದು ಎಮ್ಮೆಲ್ಸಿ ಡಾ.ಮೋಟಮ್ಮ ದೂರಿದ್ದಾರೆ.


ಗುರುವಾರ ಪಟ್ಟನದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲ್ಲಿ ಮಾತನಾಡಿದ ಅವರು, ತಾನು ಶಾಸಕಿಯಾಗುವ ಮೊದಲು ತನ್ನ ಜೀವನಕ್ಕಾಗಿ ಇರಲಿ ಎಂದು ಕುಂದೂರು ಗ್ರಾಮದ ಸ.ನಂ.156ರಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದೆ. ಅದರಂತೆ ತಮ್ಮ ಹೆಸರಿಗೆ 20 ಎಕರೆ ಜಮೀನು ಮಂಜೂರಾಗಿದೆ. ಸುತ್ತಮುತ್ತ ಇರುವ ಸ್ವಲ್ಪ ಒತ್ತುವರಿಯೂ ಇದೆ. ಇದು ಬಗರ್ ಹುಕುಂ ಒತ್ತುವರಿ. ಇದರ ತೆರವಿಗೆ ನೋಟಿಸ್ ನೀಡುವಂತಿಲ್ಲ. ಇದರ ಸಕ್ರಮಕ್ಕಾಗಿ ಹಿಂದೆಯೇ ಅರ್ಜಿ ಸಲ್ಲಿಸಲಾಗಿದೆ. ಜಮೀನು ತೆರವಿಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಮೋಟಮ್ಮ ಸ್ಪಷ್ಟಪಡಿಸಿದರು.


  ಫಾರಂ ನಂ.53ರಲ್ಲಿ ಈಗಾಗಲೇ ಸಣ್ಣಪುಟ್ಟ ಒತ್ತುವರಿದಾರರಾದ 5 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ತಹಶೀಲ್ದಾರ್ ಸಭೆ ನಡೆಸಿಲ್ಲ ಮತ್ತು ಅರ್ಜಿ ವಿಲೇವಾರಿಗೆ ಕ್ರಮ ಕೂಡಾ ಕೈಗೊಂಡಿಲ್ಲ. ಇಲ್ಲಿ ಇರುವುದು ಗ್ರೇಡ್-1 ತಹಶೀಲ್ದಾರ್, ಆದರೆ ಡಿ.ನಾಗೇಶ್ ಗ್ರೇಡ್-2 ಆದ್ದರಿಂದ ಇವರನ್ನು ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ನಂದಕುಮಾರ್ ಅವರನ್ನು ನಿಯೋಜಿಸಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಅದರಂತೆ ಡಿ.ನಾಗೇಶ್ ಅವರನ್ನು ವಗಾವಣೆ ಮಾಡಲಾಗಿತ್ತು ಎಂದು ತಿಳಿಸಿದರು.

ಆದರೆ ಡಿ.ನಾಗೇಶ್ ಶಾಸಕ ಬಿ.ಬಿ.ನಿಂಗಯ್ಯ ಅವರಿಂದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸುಳ್ಳು ಹೇಳಿ ಪತ್ರ ಬರೆಸಿ ವರ್ಗಾವಣೆ ರದ್ದುಪಡಿಸಿ ಹಿಂತಿರುಗಿದ್ದಾರೆ. ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾನೂನು ಹೋರಾಟ ನಡೆಸುವುದಾಗಿ ಮೋಟಮ್ಮ ತಿಳಿಸಿದರು.ಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಕಾರ್ಯದರ್ಶಿ ದುಂಡುಗ ರಘು, ವಕ್ತಾರ ಎಂ.ಎಸ್.ಅನಂತ್, ಎಂ.ಎಂ.ಲಕ್ಷ್ಮಣಗೌಡ, ಯಲ್ಲಪ್ಪಗೌಡ ಮತ್ತಿತರರಿದ್ದರು.


 ಎಸ್.ಎಂ.ಕೃಷ್ಣ ಕಾಂಗ್ರೆಸ್ ಬಿಟ್ಟು ಹೋಗಿದ್ದು ನೋವಾಗಿದೆ. ಹಿರಿಯ ನಾಯಕರಾಗಿದ್ದು, ಸರಕಾರಕ್ಕೆ ಸಲಹೆ ನೀಡುತ್ತಾ ಇರಬಹುದಿತ್ತು. ತಾವು ಸತ್ತರೂ ಪಕ್ಷವನ್ನು ಮಾತ್ರ ತ್ಯಜಿಸುವುದಿಲ್ಲ. ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಕಡೆಗಣಿಸುತ್ತಿರುವುದು ನನಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ವಿರೋಧಿಗಳ ಕೈಮೇಲಾಗದಂತೆ ತಡೆಯುವ ಪ್ರಯತ್ನ ಕಾಂಗ್ರೆಸ್‌ನದ್ದಾಗಬೇಕು.
ಡಾ.ಮೋಟಮ್ಮ, ಎಮ್ಮೆಲ್ಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News