ಉಪ ಚುನಾವಣೆಯಲ್ಲಿ ಗೆಲವು ನಮ್ಮದೇ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.10: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ಎರಡೂ ಕಡೆ ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇವೆ ಎಂದರು.
ನಾವು ಈಗಾಗಲೇ ಎರಡೂ ಕಡೆ ಗೆಲುವು ಸಾಧಿಸಿದ್ದೇವೆ. ಚುನಾವಣೆ ನೆಪಮಾತ್ರ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮತದಾರರು ಯಡಿಯೂರಪ್ಪ ಅವರ ಜೇಬಿನಲ್ಲಿ ಇಲ್ಲ. ನಂಜನಗೂಡು ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಚುನಾವಣೆ ನಡೆಯಲಿ ಗೊತ್ತಾಗುತ್ತದೆ ಎಂದರು.
ಉಪ ಚುನಾವಣೆಗಳು ಎಂದೂ ದಿಕ್ಸೂಚಿ ಅಲ್ಲ. ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರಿದ್ದರಿಂದ ನಂಜನಗೂಡು, ಮಹದೇವ ಪ್ರಸಾದ್ ಅವರ ನಿಧನದಿಂದ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಆಕಸ್ಮಿಕವಾಗಿ ಎದುರಾಗಿರುವ ಈ ಉಪ ಚುನಾವಣೆ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಡಿಸಿ, ಡಿಡಿಪಿಐ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಯವರು ತಿಳಿಸಿದರು.