×
Ad

ಮೂರು ಮಕ್ಕಳ ಬಲಿ ಪಡೆದವರ ಮೇಲೆ ದುರ್ಬಲ ಪ್ರಕರಣ: ಮೃತ ಮಕ್ಕಳ ರಕ್ತ ಸಂಬಂಧಿಕರಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ

Update: 2017-03-10 18:39 IST

ಚಿಕ್ಕನಾಯಕನಹಳ್ಳಿ, ಮಾ.10: ಅನುಮತಿ ಇಲ್ಲದೆ ಹಾಸ್ಟೇಲ್ ನಡೆಸಿ ಸಮರ್ಪಕ ಮೇಲುಸ್ತುವಾರಿ ಇಲ್ಲದೆ ಮೂರು ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿಯ ಮೇಲೆ 304(ಎ) ಎಂಬ ದುರ್ಬಲ ಪ್ರಕರಣ ದಾಖಲಾಗಿದ್ದು, ತಕ್ಷಣ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮೃತ ಮಕ್ಕಳ ರಕ್ತ ಸಂಬಂಧಿಕರು ಹುಳಿಯಾರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಮೃತ ಬಾಲಕ ಶ್ರೇಯಸ್ ಅವರ ತಾತ ರಂಗಪ್ಪ ಅವರು ಮಾತನಾಡಿ, ಮಕ್ಕಳಿಗೆ ವಿಷಪ್ರಾಶನವಾಗಿದ್ದರೂ ಪ್ರಥಮ ಚಿಕಿತ್ಸೆ ಕೊಡಿಸುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ತುಮಕೂರು ಆಸ್ಪತ್ರೆಗೆ ನಮ್ಮ ಮಕ್ಕಳನ್ನು ಕರೆಯೊಯ್ಯುವಷ್ಟರಲ್ಲಿ ಬೆಳಗಿನ ಜಾವ 4 ಗಂಟೆಯಾಗಿತ್ತು. ಅದೂ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಪೋಷಕರಿಗೆ ಒಂದೇ ಒಂದು ಪೋನ್ ಮಾಡಿದ್ದರೂ ಓಡೋಡಿ ಬಂದು ಎಷ್ಟು ಖರ್ಚಾಗಿದ್ದರೂ ಉಳಿಸಿಕೊಳ್ಳುತ್ತಿದ್ದೆವು. ನಮ್ಮ ಮಕ್ಕಳು ವಿಷಾಹಾರ ಸೇವಿಸಿದ್ದಾರೆ ಎಂದು ಗೊತ್ತಾದ ತಕ್ಷಣ ದೂರವಾಣಿ ಕರೆ ಸಹ ಮಾಡದೆ, ಪ್ರಥಮ ಚಿಕಿತ್ಸೆ ಸಹ ಕೊಡಿಸದೆ ನಮ್ಮ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮತ್ತೋರ್ವ ಮೃತ ಬಾಲಕ ಆಕಾಂಕ್ಷ ಅವರ ರಕ್ತ ಸಂಬಂಧಿ ನಾಗರಾಜು ಅವರು ಮಾತನಾಡಿ, ಮೃತ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಕೇಸು ಪಡೆದು ಪ್ರಕರಣ ದಾಖಲಿಸಬೇಕಿತ್ತು. ಆದರೆ ಯಾರೋ ಮೂರನೇ ಪಾರ್ಟಿ ಅವರಿಂದ ಕಂಪ್ಲೇಟ್ ಪಡೆದು ದುರ್ಬಲ ಪ್ರಕರಣ ದಾಖಲಿಸಿದ್ದು, ಶಾಲಾ ಅಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಬೆಂಬಲಿಗರನ್ನೇ ಸಾಕ್ಷಿದಾರರನ್ನಾಗಿ ಮಾಡಿಕೊಂಡು ಪ್ರಾಥಮಿಕ ವರದಿ ಹಾಕಲಾಗಿದೆ. ಪ್ರಕರಣ ಹಳ್ಳ ಹಿಡಿಸುವ ಉದ್ದೇಶವಾಗಿದ್ದು, ತಕ್ಷಣ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನ್ಯಾಯಸಮ್ಮತ ತನಿಖೆ ನಡೆಸಿ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ತಿಪಟೂರು ಡಿವೈಎಸ್ಪಿ ವೇಣುಗೋಪ್ ಹುಳಿಯಾರು ಪೊಲೀಸ್ ಠಾಣೆಗೆ ಆಗಮಿಸಿ ಮೃತ ಮಕ್ಕಳ ರಕ್ತ ಸಂಬಂಧಿಕರೊಂದಿಗೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿ ರಕ್ತ ಸಂಬಂಧಿಕರು ನೀಡಿದ ದೂರನ್ನು ಸಹ ಸ್ವೀಕರಿಸಿ, ಈಗಾಗಲೇ ತನಿಖೆ ಆರಂಭವಾಗಿದ್ದು ರಕ್ತ ಸಂಬಂಧಿಕರು ವ್ಯಕ್ತಪಡಿಸಿರುವ ಅನುಮಾನದ ನಿಟ್ಟಿನಲ್ಲಿ ನ್ಯಾಯಯುತ ತನಿಖೆ ನಡೆಸಿ ಅಗತ್ಯ ಬಿದ್ದರೆ 304(ಎ) ಪ್ರಕರಣವನ್ನೇ ಬದಲಿಸಿ ಮತ್ತೊಂದು ಪ್ರಕರಣ ದಾಖಲಿಸುವ ಭರವಸೆ ನೀಡಿದರು.

ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭ:

ಹುಳಿಯಾರು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಹಾಸ್ಟಲ್‌ನಲ್ಲಿ ಸಾರಿಗೆ ವಿಷ ಹಾಕಿ 3 ಮುಗ್ಧ ಬಾಲಕರ ಬಲಿ ಪಡೆದವರ ಪತ್ತೆಗೆ ತಿಪಟೂರು ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಹಾಸ್ಟೇಲ್‌ನ ಅಡಿಗೆ ಕೋಣೆ ದನದ ಕೊಟ್ಟಿಗೆಗಿಂತಲೂ ಕಡೆಯಾಗಿದ್ದು ಸ್ವಚ್ಚತೆ ಇಲ್ಲದಾಗಿತ್ತು. ಇಲಿ, ಹೆಗ್ಗಣ, ಜಿರಲೆಗಳ ಆವಾಸ ತಾಣವಾಗಿತ್ತು. ಅಲ್ಲದೆ ಶಾಲಾ ಕಟ್ಟಡದ ಪಕ್ಕದಲ್ಲಿ ದನದ ಕೊಟ್ಟಿಗೆಯಂತೆ ಅಡಿಗೆ ಕೋಣೆ ನಿರ್ಮಿಸಿದ್ದು ಹಾಸ್ಟೆಲ್ ಒಳಗಿರುವವರಿಗೆ ತಿಳಿಯದಂತೆ ಅಡಿಕೆ ಕೋಣೆ ಒಳಗೆ ಸುಲಭವಾಗಿ ಬಂದೋಗಬಹುದಾಗಿತ್ತು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರೂ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾತ್ರಿ 8 ರ ಸುಮಾರಿನಲ್ಲಿ ಹಾಸ್ಟೇಲ್ ಮುಂಭಾಗದ ಕಾಂಪೌಂಡ್ ಹತ್ತಿರ ಸ್ಕೂಟಿಯಲ್ಲಿ ಇಂಡಿಕೇಟರ್ ಹಾಕಿಕೊಂಡು ಬಹಳ ಸಮಯ ಅಪರಿಚಿತ ವ್ಯಕ್ತಿಯೊಬ್ಬರು ನಿಂತಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸಾರಿಗೆ ವಿಷ ಹಾಕುವವರಿಗೆ ಹೊರಗಿನಿಂದ ಆಡಳಿತ ಮಂಡಳಿಯ ಬರುವ ಬಗ್ಗೆ ಸೂಚನೆ ನೀಡಲು ನಿಂತಿರಬಹುದೆಂದು ಊಹಿಸಲಾಗಿದ್ದು ಐಸಿಯುನಲ್ಲಿರುವ ವಾಚ್ ಮ್ಯಾನ್ ಗುಣಮುಖರಾದ ನಂತರ ಅವರಿಂದ ಮಾಹಿತಿ ಪಡೆದು ಸ್ಕೂಟಿಯಲ್ಲಿ ಬಂದವರಾರು ಎಂದು ತಿಳಿಯಬಹುದಾಗಿದೆ ಎನ್ನಲಾಗಿದೆ.

ಇನ್ನು ಪ್ರತಿ ದಿನ ಮಕ್ಕಳು ಪೋಷಕರಿಗೆ ದೂರವಾಣಿ ಕರೆ ಮಾಡಲು ಹಾಸ್ಟೇಲ್‌ನಲ್ಲಿ ಪೋನ್ ಇಡಲಾಗಿತ್ತು. ಆದರೆ ಸಾರಿಗೆ ವಿಷವಿಕ್ಕಿರುವ ದಿನ ಹಾಸ್ಟಲ್‌ನಲ್ಲಿ ಪೋನ್ ಇರಲಿಲ್ಲ. ವಿಷ ಸೇವಿಸಿ ಅಸ್ವಸ್ಥರಾದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಉಳಿದ ಮಕ್ಕಳು ಪೋಷಕರಿಗೆ ವಿಷಯ ತಿಳಿಸಲು ಪರದಾಡಿದರೂ ಪೋನ್ ಸಿಗದಂತೆ ಅವೈಡ್ ಮಾಡಲಾಗಿದೆ. ಇದು ಏಕೆ ಮತ್ತು ಯಾರು ಮಾಡಿದ್ದು ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.

ಖಾಸಗಿ ಶಾಲೆಯಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸುವಂತೆ ಆದೇಶವಿದೆ.ಅದರಂತೆ ಐದಾರು ಕಡೆ ಸಿಸಿ ಟಿವಿ ಅಳವಡಿಸಲಾಗಿದ್ದರೂ ಜ.4ಕ್ಕೆ ಸಿಸಿ ಟಿವಿ ಆಫ್ ಆಗಿದೆ. ಎರಡ್ಮೂರು ತಿಂಗಳಿಂದ ಸಿಸಿ ಟಿವಿ ಆಫ್ ಆಗಿದ್ದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿರುವುದು ಪೊಲೀಸರಿಗೆ ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಈ ನಿಟ್ಟಿನಲ್ಲಿ ಸಿಸಿ ಟಿವಿ ನಿರ್ವಹಣೆ ಮಾಡುತ್ತಿರುವವರನ್ನು ಸೂಕ್ತ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ.

ಮಾಜಿ ಪ್ರಿನ್ಸಿಪಾಲ್ ಅವರ ಕೈವಾಡ ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳ ಒಳಜಗಳದ ಬಗ್ಗೆಯೂ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಒಟ್ಟಾರೆ ಸಾರಿನಲ್ಲಿ ವಿಷಜಂತು ಬಿದ್ದಿಲ್ಲ. ಉದ್ದೇಶ ಪೂರ್ವಕವಾಗಿಯೇ ಸಾರಿಗೆ ವಿಷ ಹಾಕಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿದುಬಂದಿದ್ದು ಪೊಲೀಸರು ಆರೋಪಿಯ ಬೇಟೆಗೆ ಬಲೆ ಬೀಸಿದ್ದಾರೆ.

ಮಾ.11ರಂದು ಹುಳಿಯಾರಿಗೆ ವಿ.ಎಸ್. ಉಗ್ರಪ್ಪ ಭೇಟಿ:

ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ತಡೆ ಮತ್ತು ವರದಿ ನೀಡುವ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾ.11ರಂದು ಸಂಜೆ 5.30ಕ್ಕೆ ಹುಳಿಯಾರಿಗೆ ಭೇಟಿ ನೀಡಿ, ವಿಷ ಆಹಾರ ಸೇವನೆಯಿಂದ ಮೃತಪಟ್ಟ ವಿದ್ಯಾವಾರಿಧಿ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವರಲ್ಲದೆ, ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News