ಅಪರಾಧ ತಡೆಗೆ ಸಾಮಾಜಿಕ ಜಾಲತಾಣಗಳ ಬಳಕೆ : ಪಿ. ಹರಿಶೇಖರನ್
ಕಾರವಾರ, ಮಾ.10: ಸಾಮಾಜಿಕ ಜಾಲತಾಣದಲ್ಲಿ ನಡೆಯಬಹುದಾದ ಅಪರಾಧ ಸಂಖ್ಯೆಯನ್ನು ಪತ್ತೆ ಹಚ್ಚಲು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಖಾತೆ, ಜಿಲ್ಲೆಗೊಂದು ವೆಬ್‌ಸೈಟ್, ಅಧಿಕಾರಿಗಳ ಮಟ್ಟದಲ್ಲಿ ಟ್ವಿಟರ್ ಖಾತೆಗಳನ್ನು ಆರಂಭಿಸುವ ಚಿಂತನೆ ನಡೆದಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಪಿ. ಹರಿಶೇಖರನ್ ಹೇಳಿದರು.
ಕಾರವಾರಕ್ಕೆ ಆಗಮಿಸಿದ ಸಂದಭರ್ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಪೊಲೀಸ್ ಇಲಾಖೆಗೆ ಜನಸಾಮಾನ್ಯ ರೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಲು ಹಾಗೂ ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಮೂಲಕ ನಡೆಯಬಹುದಾದ ಅಪರಾಧದ ತಡೆಗೆ ಕ್ರಮಕೈಗೊಳ್ಳಲು ಸಹಾಯವಾಗಲಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ, ಅಪರಾಧಗಳು ನಡೆದಲ್ಲಿ ತಕ್ಷಣ ಮಾಹಿತಿ, ಘಟನೆಗಳ ವಿವರ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ವಿಭಾಗ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಎಸ್ಪಿಯಿಂದ ಹಿಡಿದು, ಪೊಲೀಸ್ ಅಧಿಕಾರಿಗಳಿಗೆ ಟ್ವಿಟರ್ ಖಾತೆ ತೆರೆಯುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾರವಾರದಿಂದ ಮಂಗಳೂರುವರೆಗಿನ 315 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತಗಳ ನಡೆಯುತ್ತಿವೆೆ. ಈ ಹೆದ್ದಾರಿಯನ್ನು ಅಪಘಾತ ರಹಿತ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಸಲುವಾಗಿ ಈ ಕುರಿತು ಅಧ್ಯಯನ ನಡೆಸಿ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ವಿವಿಧ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ.
ಮಾದಕ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಸಂಗ್ರಹಿಸಿಟ್ಟುಕೊಳ್ಳುವ ವಿದ್ಯಾರ್ಥಿ ಮತ್ತು ಸಾರ್ವಜನಿಕರನ್ನು ಕಠಿಣ ಶಿಕ್ಷೆಗೆ ಮುಲಾಜಿಲ್ಲದೆ ಗುರಿಪಡಿಸಲಾಗುವುದು. ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಅರಿವು ಮೂಡಿಸಲು ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಗಳು ಪೊಲೀಸರೊಂದಿಗೆ ಕೈ ಜೋಡಿಸಬೇಕು. ತಪ್ಪು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು. ಹೆಚ್ಚಿರುವ ಒಸಿ, ಮಟ್ಕಾ ದಂಧೆ ನಿಯಂತ್ರಣಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಭಟ್ಕಳದ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸಿದ್ದು, ಅಲ್ಲಿನ ಆಗುಹೋಗುಗಳ ಮೇಲೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ಒಂದು ವಾರ ಭಟ್ಕಳದಲ್ಲಿ ತಂಗುವುದಾಗಿ ತಿಳಿಸಿದರು. ಬ್ಯಾಂಕ್ ಆಡಳಿತ ಮಂಡಳಿಯವರ ಸಭೆ ನಡೆಸಿ, ಎಟಿಎಂ ಕೇಂದ್ರಗಳಲ್ಲಿ ಸುರಕ್ಷತೆಗಾಗಿ ಸಿಬ್ಬಂದಿ ಹಾಗೂ ಸಿಸಿ ಟಿವಿ ಅಳವಡಿಸುವಂತೆ ಸೂಚಿಸಿದ್ದರೂ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ರಾತ್ರಿ ಸಿಬ್ಬಂದಿ ಯುವಕರನ್ನು ನಿಯೋಜಿಸುವ ಬದಲು ವಯಸ್ಸಾದವರನ್ನೇ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ವರಿಷ್ಠಾಧಿಕಾರಿ ದೇವರಾಜು, ಡಿವೈಎಸ್ಪಿ ಎಂ. ಟಿ. ಪ್ರಮೋದರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಳವು ಪ್ರಕರಣ
7ಮಂದಿ ಅಂತಾರಾಜ್ಯ ಆರೋಪಿಗಳ ಬಂಧನ
ಕಾರವಾರ, ಮಾ.10: ಕಳೆದ ಕೆಲವು ತಿಂಗಳ ಹಿಂದೆ ಕಾರವಾರ ಹಾಗೂ ಗೋವಾದ ವಿವಿಧೆಡೆ ಮನೆ ಹಾಗೂ ದೇವಸ್ಥಾನಗಳಲ್ಲಿ ಕಳವು ನಡೆಸಿದ ಆರೋಪದಲ್ಲಿ ಒಟ್ಟು ಏಳು ಮಂದಿ ಅಂತಾರಾಜ್ಯ ಕಳ್ಳರನ್ನು ಕಾರವಾರ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಕಾರವಾರದ ಎಎಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನಿಡಿದ ಅವರು, ಒಟ್ಟು 9 ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು. ಕಾರವಾರದಲ್ಲಿ ಮನೆಗಳ್ಳತನ, ದೇವಸ್ಥಾನ ಕಳವು, ಅಂಕೋಲಾದಲ್ಲಿ ಮನೆಗಳ್ಳತನ ಸೇರಿದಂತೆ ಗೋವಾ ರಾಜ್ಯದ ಫೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.
ಆರೋಪಿಗಳ ಮಾಹಿತಿ: ಗೋವಾ ಮೂಲದ ಲಾರಿ ಕ್ಲೀನರ್ ನಿಖಿಲ್ ಮಯೇಕರ್, ಆಟೊ ರಿಕ್ಷಾ ಚಾಲಕ ವಿರಾಜ್ ನಾಯ್ಕ, ವಿಷ್ಣು ಪೂಜಾರಿ, ಜಯರಾಮ ಶೆಡ್ವೇರೆಕರ್, ಸಾಯಿ ಶೆಡ್ವೇರೆಕರ್, ಗೋವಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ ವಡ್ಡರ, ಚಿನ್ನ, ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುವ ರಾಮಚಂದ್ರ ಪವಾರ, ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶೃತೀಕ ಸುಭಾಷ ಗಾವಡೆ, ಬಳ್ಳಾರಿ ಮೂಲಕ ಪ್ರಸ್ತುತ ಗೋವಾದಲ್ಲಿ ವಾಸವಾಗಿರುವ ಬಸವರಾಜ್ ಕೂಡ್ಲಗಿ ಹಾಗೂ ಗೋವಾದ ಸಾಹಿಲ್ ಬೈಸ್ವಾರ್ ಇವರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ ಎಂದರು.
ವಶ ಪಡಿಸಿಕೊಂಡ ಸೊತ್ತುಗಳು: ಬಂಧಿತ ಆರೋಪಿಗಳಿಂದ ಅಂದಾಜು 10.7 ಲಕ್ಷ ರೂ. ಮೌಲ್ಯದ ಒಟ್ಟು 530ಗ್ರಾಂ ಚಿನ್ನ, 2.4 ಲಕ್ಷ ರೂ. ಮೌಲ್ಯದ 4 ಕೆ.ಜಿ. ಬೆಳ್ಳಿ ಸೇರಿದಂತೆ 40,400 ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು ಚಿನ್ನ, ಬೆಳ್ಳಿಯ ಸೊತ್ತುಗಳನ್ನು ನಗರದ ಕೋಡಿಭಾಗದ ಚೇತನ ನಾಯ್ಕ, ದಯಾನಂದ ನಾಯ್ಕ, ವಾಮನ ಆಶ್ರಮ ರಸ್ತೆ ಬಳಿಯ ಶಾಂತಾ ನಾಯ್ಕ, ಸೋನಾರವಾಡಾದಲ್ಲಿರುವ ಸುಧಾಕರ ಗುನಗಿ, ಶಿರವಾಡದ ಆನಂದು ಕೋಠಾರಕರ್ ಅವರ ಮನೆ, ಶೃಂಗೇರಿ ಶಂಕರ ಮಠ, ಪ್ರದೀಪ್ ದೇಸಾಯಿ ಅವರ ಕ್ಲಿನಿಕ್, ಅಂಕೋಲಾದ ಮಠಾಕೇರಿಯ ಶೋಭಾ ಶೆಟ್ಟಿ ಅವರ ಮನೆಯನ್ನು ದರೋಡೆ ಮಾಡಿದ್ದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶರಣಗೌಡ ವಿ. ಎಸ್., ಪಿಎಸ್ಸೈ ಕುಸುಮಾಧರ ಕೆ., ಭಗವಂತ ಎಂ. ಕಾಳೆ, ನೀತು ಗುಡೆ, ಪೊಲೀಸ್ ಸಿಬ್ಬಂದಿ ಸುದರ್ಶನ ನಾಯ್ಕ, ಸುರೇಶ ತಾಮ್ಸೆ, ಸಂತೋಷ ನಾಯ್ಕ, ಹನುಮಂತ ಕಬಾಡಿ, ದಿನೇಶ ನಾಯಕ, ಅಜೀತ್ ಗೋವೇಕರ್, ಚಾಲಕ ಮಾರುತಿ ಗಾಳಿಪೂಜ ಸಂಜೀವ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.