×
Ad

ಆಶೋತ್ತರ ಈಡೇರಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲ: ಗೌರಿ ಲಂಕೇಶ್

Update: 2017-03-10 23:02 IST

ದಾವಣಗೆರೆ, ಮಾ.10: ಈ ದೇಶವನ್ನು ಆಳಿದ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಆಶೋತ್ತರ ಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಈ ವ್ಯವಸ್ಥೆ ಮುಂದುವರಿದಿದೆ. ರಾಜಕೀಯ ಲಾಭಕ್ಕಾಗಿ ಜಾತಿ ವ್ಯವಸ್ಥೆಯನ್ನು ಮುಂದೆ ಮಾಡಲಾಗುತ್ತಿದೆ. ಇದರ ಧ್ವನಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಕೋಮುಗಲಭೆಗಳು 1992ರಿಂದೀಚೆಗೆ ಹೆಚ್ಚಾಗ ತೊಡಗಿವೆ ಎಂದರು.


ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸುಹಾನ ಸೈಯದ್ ಹಾಡಿದ ಹಾಡನ್ನು ದೊಡ್ಡ ವಿಷಯವನ್ನಾಗಿ ಮಾಡಲಾಯಿತು. ಸಂಗೀತಕ್ಕೆ ಯಾವುದೇ ಜಾತಿಯ ಭೇದವಿಲ್ಲ. ಆದರೆ ಇಬ್ಬರ ಮೂವರ ಹೇಳಿಕೆಗಳನ್ನು ತೆಗೆದುಕೊಂಡು ದೊಡ್ಡದನ್ನಾಗಿ ಪ್ರತಿಬಿಂಬಿಸಲಾಯಿತು. ಕೆಲವರು ಪ್ರಚಾರಕ್ಕಾಗಿ ಮಾಡಿದರೆ, ಇನ್ನೂ ಕೆಲವರು ಟಿಆರ್‌ಪಿ ಹೆಚ್ಚಿ ಸಿಕೊಳ್ಳಲು ಪ್ರಚಾರ ಮಾಡಿದ್ದಾರೆ ಎಂದು ಟೀಕಿಸಿದರು.


ಸಂತ ಶಿಶುನಾಳ ಶರಿಫ್, ಕರೀಂಖಾನ್ ಸೇರಿದಂತೆ ಮೊದ ಲಾದವರು ಕನ್ನಡದಲ್ಲಿ ಹಾಡನ್ನು ರಚಿಸಿದ್ದಾರೆ, ಹಾಡಿದ್ದಾರೆ. ಆಗ ವ್ಯಕ್ತವಾಗದ ವಿರೋಧ ಈಗೇಕೆ ಎಂದು ಪ್ರಶ್ನಿಸಿದ ಅವರು, ಸುಹಾನ ಹಾಡಿಗೆ ಎಲ್ಲರ ಬೆಂಬಲ ಇದೆ ಎಂದು ಹೇಳಿದರು.

12ರಂದು ಲಂಕೇಶ್ ವಾರ್ಷಿಕೋತ್ಸವ 
ಇದೇ 12ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ವಿವಿಧ ಸಂಘಟನೆಗಳ ನೆರವಿನೊಂದಿಗೆ ಗೌರಿ ಲಂಕೇಶ್ ಪತ್ರಿಕೆಯ 12ನೆ ವಾರ್ಷಿಕೋತ್ಸವ ಹಾಗೂ ಪಿ.ಲಂಕೇಶ್ 82ರ ಕಾರ್ಯಕ್ರಮ ನಡೆಯಲಿದೆ.

ಹೊಸ ತಲೆಮಾರಿನ ಮಹಿಳೆ, ಪಂಚ ರಾಜ್ಯಗಳ ಚುನಾವಣಾ ವಿಶ್ಲೇಷಣೆ, ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಸಾಧ್ಯತೆಗಳು ಕುರಿತು ಚರ್ಚಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಸ್.ಮಂಜುನಾಥ ಕುರ್ಕಿ, ಬಿ.ಎಂ.ಹನುಮಂತಪ್ಪ, ಅನೀಷ್ ಪಾಶಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News