ರೌಡಿ ಶೀಟರ್ ಹತ್ಯೆ ಆರೋಪಿಗಳ ಶೀಘ್ರ ಸೆರೆ: ಎಸ್ಪಿ ಖರೆ
ಶಿವಮೊಗ್ಗ, ಮಾ. 10: ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ರೌಡಿ ಗಿರೀಶ್ ಹತ್ಯೆಗೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರೀಶ್ ವಿರುದ್ಧ ಕೊಲೆ ಮತ್ತು ಡಕಾಯಿತಿಗೆ ಸಂಬಂಧಿಸಿದಂತೆ ವಿನೋಬನಗರ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದೆ. ಇದರ ನಂತರ ಆತ ರೌಡಿಸಂ ತೊರೆದು ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದ್ದು, ಅವಿನಾಶ್ ಎಂಬಾತನ ಜೊತೆ ವಿನಾ ಕಾರಣ ಗಲಾಟೆ ಮಾಡಿಕೊಂಡ ಪರಿಣಾಮ ಆತನ ಕೊಲೆ ಸಂಭವಿಸಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿಲ್ಲ ಎಂದು ಹೇಳಿದರು.
ಅಯೂಬ್ ಪಾಷ ಅವರ ಹತ್ಯೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸೀನ್ ಕುರೇಶಿ, ಕೀಲಿ ಇಮ್ರಾನ್ ಸಹಿತ ನಾಲ್ವರಿಗೆ 10 ವರ್ಷಗಳ ಶಿಕ್ಷೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಅಭಿಯೋಜಕ ಪ್ರಾಣೇಶ್ ಭರತನೂರು, ಕೊಲೆ ಯತ್ನ ಪ್ರಕರಣದಲ್ಲಿ ಇತ್ತೀಚೆಗೆ ಅತೀ ಹೆಚ್ಚಿನ ಪ್ರಮಾಣದ ಶಿಕ್ಷೆಗೊಳಗಾದ ಪ್ರಕರಣ ಇದು. ಹತ್ಯೆಯಿಂದ ಪಾರಾದ ಅಯೂಬ್ ಪ್ರಕರಣಕ್ಕೆ ಬಹುಮುಖ್ಯ ಸಾಕ್ಷ್ಯವಾಗಿದ್ದ ಕಾರಣ ಜಯ ಲಭಿಸಿತು ಎಂದರು.
ಹೆಚ್ಚುವರಿ ಎಸ್ಪಿ ಮುತ್ತುರಾಜ್, ಡಿವೈಎಸ್ಪಿ ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.