ಬಿಜೆಪಿ ಮುಖಂಡ ಗೋ.ಮಧುಸೂದನ್‌ಗೆ ಸೇರಿದ ರೆಸಾರ್ಟ್ ಮುಟ್ಟುಗೋಲಿಗೆ ಡಿಸಿ ಆದೇಶ

Update: 2017-03-11 17:13 GMT

ಗುಂಡ್ಲುಪೇಟೆ, ಮಾ.11: ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ ಭೂಮಿ ಖರೀದಿ, ಖಾತೆ ಬದಲಾವಣೆ ಸೇರಿದಂತೆ ಹಲವಾರು ಅಕ್ರಮವೆಸಗಿರುವ ಬಗ್ಗೆ ಆರೋಪ ಎದುರಿಸುತ್ತಿರುವ ಬಿಜೆಪಿಯ ಪ್ರಭಾವಿ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್‌ರಿಗೆ ಸೇರಿದ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಟೈಗರ್ ರಾಂಚ್ ರೆಸಾರ್ಟ್ ಹಾಗೂ 40 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಕಂದಾಯ ಇಲಾಖೆಯ ದಾಖಲೆಗೆ ಸೇರಿಸಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ?:

ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ತಮ್ಮ ಹಾಗೂ ಸಂಬಂಧಿ ಟಿ.ಎಲ್.ಜಯಲಕ್ಷ್ಮೀ ಹೆಸರಿನಲ್ಲಿ ಹಂಗಳ ಹೋಬಳಿಯ ಮಂಗಲ ಗ್ರಾಮದ ಬಳಿ ಕೃಷಿ ಉದ್ದೇಶಕ್ಕಾಗಿ ಗಿರಿಜನರಿಂದ 40 ಎಕರೆ ಭೂಮಿಯನ್ನು ಅಕ್ರಮವಾಗಿ ಖರೀದಿಸಿದ್ದರು. ಅಲ್ಲದೇ ತಾವು ಮೂಲತಃ ವ್ಯವಸಾಯಗಾರರೆಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ, 1961ರ ಭೂ ಸುಧಾರಣಾ ಕಾಯ್ದೆ 80ರನ್ವಯ 1995ರಲ್ಲಿ ನಂಜನಗೂಡು ಉಪವಿಭಾಗಾಧಿಕಾರಿಯಿಂದ ಭೂಮಿಯ ಖಾತೆ ಬದಲಾವಣೆಗೆ ಅನುಮತಿ ಪಡೆದಿದ್ದರು.

ಅರಣ್ಯ ಇಲಾಖೆ ಹಾಗೂ ಸರಕಾರದ ಗಮನಕ್ಕೆ ತಾರದೆ ಅಂದಿನ ಉಪವಿಭಾಗಾಧಿಕಾರಿ  ಈ ಭೂಮಿಯ ಖಾತೆ ಬದಲಾವಣೆ ಮಾಡಿದ್ದರು. ನಂತರ ಬಂಡೀಪುರ ಹುಲಿಯೋಜನೆಯ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕೆಂದು ಪಡೆದ ಈ ಭೂಮಿಯನ್ನು ವಾಣಿಜ್ಯ ಬಳಕೆಗಾಗಿ ರೆಸಾರ್ಟ್ ನಿರ್ಮಾಣ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪ್ರಾದೇಶಿಕ ಆಯುಕ್ತರಿಗೆ ದೂರು:

ಈ ಪ್ರಕರಣದ ಬಗ್ಗೆ 2015-16ರಲ್ಲಿ ಅಂದಿನ ಚಾಮರಾಜನಗರದ ಜಿಲ್ಲಾಧಿಕಾರಿ ಹಾಗೂ ಮೈಸೂರಿನ ಪ್ರಾಜೆಕ್ಟ್ ಟೈಗರ್ ಯೋಜನೆಯ ಸಿಸಿಎಫ್ ರವರು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ಜಮೀನು ಖರೀದಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಗೋ ಮಧುಸೂದನ್ ಮತ್ತು ಜಯಲಕ್ಷ್ಮೀರವರ ಒಡೆತನದಲ್ಲಿರುವ ಗಿರಿಜನರ ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಂತೆ ಫೆ.20ರಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ.

ವರದಿಗೆ ಹೋದವರಿಗೆ ಧಮ್ಕಿ:

ಬಿಜೆಪಿಯ ಪ್ರಭಾವಿ ಮುಖಂಡರಾಗಿರುವ ಗೋ.ಮಧುಸೂದನ್ ಮಾಲಕತ್ವದ ಟೈಗರ್ ರಾಂಚ್ ರೆಸಾರ್ಟ್‌ನ ಬಗ್ಗೆ ಶುಕ್ರವಾರ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ರೆಸಾರ್ಟ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಂಗಲ ಗ್ರಾಮದ ವೆಂಕಟರಾಮ್‌ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಹಲ್ಲೆಗೂ ಮುಂದಾದ ಘಟನೆ ಶನಿವಾರ ನಡೆದಿದ್ದು, ರೆಸಾರ್ಟ್ ಪ್ರವೇಶಕ್ಕೆ ಮಧೂಸೂದನ್ ಅವರ ಅನುಮತಿ ತರಬೇಬೇಕೆಂದು ಸಿಬ್ಬಂದಿ ಮಾಧ್ಯಮದವರಿಗೆ ಹೇಳಿ, ಒಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಘಟನೆ ನಡೆಯಿತು.

ಗುಂಡ್ಲುಪೇಟೆ ತಾಲೂಕಿನಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಹರಿಸಲಾಗಲಿಲ್ಲ. ಜಿಲ್ಲಾಧಿಕಾರಿ ಆದೇಶದಂತೆ ಗೋ. ಮಧುಸೂಧನ್ ಹಾಗೂ ಜಯಲಕ್ಷ್ಮೀ ಅವರ ಹೆಸರಿನಲ್ಲಿರುವ ಪಹಣಿಯನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಆದೇಶದ ಮೇರೆಗೆ ಸರಕಾರದ ಹೆಸರಿಗೆ ವರ್ಗಾಯಿಸಲಾಗುತ್ತಿದೆ.
        
- ಕೆ.ಸಿದ್ದು,

ತಹಶೀಲ್ದಾರ್, ಗುಂಡ್ಲುಪೇಟೆ.

Writer - ಮಹದೇವಪ್ರಸಾದ್ ಹಂಗಳ

contributor

Editor - ಮಹದೇವಪ್ರಸಾದ್ ಹಂಗಳ

contributor

Similar News