ವಿಷ ಆಹಾರ ಸೇವಿಸಿ ಮಕ್ಕಳ ಸಾವು ಪ್ರಕರಣ: ಮಾಜಿ ಶಾಸಕ, ಪತ್ನಿ ಪೊಲೀಸರಿಗೆ ಶರಣು
ಹುಳಿಯೂರು, ಮಾ.12: ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವನೆಯಿಂದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಮಾಜಿ ಶಾಸಕ ಹಾಗೂ ಆತನ ಪತ್ನಿ ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮತ್ತು ಅವರ ಪತ್ನಿ, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕವಿತಾ ಕಿರಣ್ ಹುಳಿಯಾರು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಹುಳಿಯಾರು ಠಾಣೆಯಲ್ಲಿ ಶರಣನಾಗಿದ್ದಾರೆ.
ಬುಧವಾರ ರಾತ್ರಿ ನಡೆದ ಶಾಲಾ ದುರ್ಘಟನೆಗೆ ಸಂಬಂಧಿಸಿದಂತೆ ಹುಳಿಯಾರು ಠಾಣೆಯಲ್ಲಿ 304 ಎ ಅಡಿಯಲ್ಲಿ ದೂರು ದಾಖಲಾಗಿತ್ತು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹಾಗೂ ಅವರ ಪತ್ನಿ ಕವಿತಾ ಕಿರಣ್‌ರನ್ನು ಪ್ರಮುಖ ಆರೋಪಿಯನ್ನಾಗಿ ಮತ್ತು ಇತರ ನಾಲ್ಕು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಅನುಮತಿಯಿಲ್ಲದೆ ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಈ ಪೈಕಿ ಉಳಿದ ನಾಲ್ವರಾದ ಅಡುಗೆಯವರಾದ ಶಿವಯ್ಯ, ಸಹಾಯಕಿ ರಂಗಲಕ್ಷ್ಮೀ, ಮೇಲ್ವಿಚಾರಕ ಸುಹಾಸ್ ಮತ್ತು ಜಗದೀಶ್‌ರನ್ನು ಗುರುವಾರ ರಾತ್ರಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಪ್ರಮುಖ ಆರೋಪಿಗಳಾದ ಕಿರಣ್ ಹಾಗೂ ಕವಿತಾ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದರು. ಆದರೆ ಶನಿವಾರ ರಾತ್ರಿ ಹುಳಿಯಾರು ಠಾಣೆಗೆ ವಕೀಲರೊಂದಿಗೆ ಹಾಜರಾದ ಆರೋಪಿ ದಂಪತಿಯು ಡಿವೈಎಸ್ಪಿವೇಣುಗೋಪಾಲ್ ಮುಂದೆ ಶರಣಾಗಿದ್ದಾರೆ.